ರಮ್ಯಾ ಆಯ್ತು, ಈಗ ಐಂದ್ರಿತಾ; ಕನ್ನಡತೀರಿಗೆ ಜಂಭ ಜಾಸ್ತಿನಾ?
ನಾವು ಕನ್ನಡದವರೇ ಆಗಿದ್ದರೂ ನಮಗೆ ಅವಕಾಶ ಕೊಡುತ್ತಿಲ್ಲ. ಹಾಗಾಗಿ ಬೇರೆ ಭಾಷೆಗಳತ್ತ ಹೋಗುತ್ತೇವೆ ಎಂದು ಹೇಳುವ ಕನ್ನಡ ಮಣ್ಣಿನ ಕಂಪಿನ ಹುಡುಗಿಯರು ಒಂದು ಕಡೆ. ಆಗೊಮ್ಮೆ ಈಗೊಮ್ಮೆ ಕನ್ನಡ ಬಳಸಿ, ತಾವೂ ಕನ್ನಡದವರು ಎಂದು ಸಾರಿ ಹೇಳುವ ಕಲಾವಿದರು ಮತ್ತೊಂದು ಕಡೆ. ಮೊದಲ ವರ್ಗದವರು ತೀರಾ ಸೌಮ್ಯರಾಗಿರುತ್ತಾರೆ, ಎರಡನೇ ವರ್ಗದವರದ್ದು ಒರಟು ಸ್ವಭಾವ. ಯಾಕೆ ಹೀಗೆ?
ಈ ಪ್ರಶ್ನೆ ಪ್ರಸಕ್ತ ಎದ್ದಿರುವುದು ಐಂದ್ರಿತಾ ರೇ ಪ್ರಕರಣದಿಂದ. ಮೂಲತಃ ಕನ್ನಡಿಗಳಲ್ಲದೇ ಇದ್ದರೂ, ಬೆಂಗಳೂರಿನಲ್ಲೇ ನೆಲೆಸಿರುವುದರಿಂದ ಕನ್ನಡ ಬಲ್ಲ ಹುಡುಗಿ. ನಟನೆಗಿಂತ ಸದಾ ವಿವಾದಗಳಲ್ಲೇ ಸುದ್ದಿ ಮಾಡಿದವಳು. ಒಂದು ರೀತಿಯಲ್ಲಿ ಹಲವು ವಿಚಾರಗಳಲ್ಲಿ ಲಕ್ಕಿ ಸ್ಟಾರ್ ಖ್ಯಾತಿಯ ರಮ್ಯಾರನ್ನು ನೆನಪಿಸುವ ಹುಡುಗಿ.
MOKSHA
ಅದನ್ನು ಜಂಭವೆನ್ನಬೇಕೋ, ಅಹಂ ಎನ್ನಬೇಕೋ ಅಥವಾ ಸ್ವಾಭಿಮಾನದ ಪ್ರಶ್ನೆಯೆನ್ನಬೇಕೋ? ಒಟ್ಟಾರೆ ಅವರನ್ನು ನಂಬಿ ಹಣ ಹಾಕಿದ ನಿರ್ಮಾಪಕರಿಗಂತೂ ನುಂಗಲಾರದ ತುತ್ತಾಗಿರುವುದಂತೂ ಹೌದು.
ಈ ಪ್ರಕರಣವನ್ನೇ ನೋಡೋಣ. ಇದು ಲೂಸ್ ಮಾದ ಯೋಗೀಶ್ ನಾಯಕನಾಗಿರುವ 'ಧೂಳ್' ಚಿತ್ರಕ್ಕೆ ಸಂಬಂಧಿಸಿದ್ದು.
ಐಂದ್ರಿತಾಗೆ ವೃತ್ತಿಪರತೆಯಿಲ್ಲ: ನಿರ್ದೇಶಕ ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಜತೆ ಕಾಲು ಕೆರೆದು ಜಗಳ ಮಾಡಿದ್ದ ಐಂದ್ರಿತಾಳ ಲೇಟೆಸ್ಟ್ ವಿವಾದ ಧೂಳ್ ಚಿತ್ರದ್ದು. ಇತ್ತೀಚೆಗಷ್ಟೇ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಐಂದ್ರಿತಾಗೂ ಆಹ್ವಾನ ನೀಡಲಾಗಿತ್ತು.
ಆದರೆ ಐಂದ್ರಿತಾ ಗಾಯಬ್. ಜ್ವರದಿಂದ ಬಳಲುತ್ತಿದ್ದರೂ ನಾಯಕ ಯೋಗೀಶ್ ಕಷ್ಟಪಟ್ಟು ಬಂದಿದ್ದರು. ಇದರಿಂದ ಸಹಜವಾಗಿಯೇ ಆಕ್ರೋಶಗೊಂಡ ನಿರ್ದೇಶಕ ಧರಣಿ, ನಟಿ ಐಂದ್ರಿತಾ ಮೇಲೆ ಉರಿದು ಬಿದ್ದಿದ್ದಾರೆ.
ಐಂದ್ರಿತಾ ಬಗ್ಗೆ ನಿಜಕ್ಕೂ ನನಗೆ ತುಂಬಾ ಬೇಸರವಾಗಿದೆ. ಕಳೆದ ಎರಡು ದಶಕಗಳಿಂದ ಚಿತ್ರರಂಗದಲ್ಲಿರುವ ನನ್ನ ಪ್ರಕಾರ ಈಕೆಯಷ್ಟು ವೃತ್ತಿ ವಿರೋಧಿ ನೀತಿಯನ್ನು ಹೊಂದಿರುವ ಮತ್ತೊಬ್ಬ ನಟಿ ಬೇರೆ ಯಾರೂ ಇಲ್ಲ. ಚಿತ್ರದ ನಿರ್ಮಾಪಕ-ನಿರ್ದೇಶಕರು ಕರೆ ಮಾಡಿದಾಗ, ಅದಕ್ಕೆ ಪ್ರತಿಕ್ರಿಯಿಸಬೇಕೆಂಬ ಕನಿಷ್ಠ ಸೌಜನ್ಯವೂ ಆಕೆಗಿಲ್ಲ ಎಂದು ಕಿಡಿ ಕಾರಿದ್ದಾರೆ.
ಕಾರ್ಯಕ್ರಮಕ್ಕೆ ಬರುವಂತೆ ಸಾಕಷ್ಟು ಸಂದೇಶಗಳನ್ನು ರವಾನಿಸಿದೆ. ಆದರೆ ಯಾವುದಕ್ಕೂ ಪ್ರತಿಕ್ರಿಯೆಯಿಲ್ಲ. ಕೊನೆಗೆ ಯೋಗಿ ಫೋನ್ ಮಾಡಿದಾಗಲೂ ಇದೇ ರೀತಿ ವರ್ತಿಸಿದಳು. ಆದರೆ ತಾನು ಗೋವಾದಲ್ಲಿದ್ದೇನೆ ಎಂದು ಎಸ್ಎಂಎಸ್ ಕಳುಹಿಸಿದ್ದಾಳೆ.
ಇಂತಹ ಅನುಭವ ಆಕೆಯಿಂದ ಆಗಿರುವುದು ನನಗೆ ಮಾತ್ರವಲ್ಲ. ಈ ಹಿಂದೆ ವೀರ ಪರಂಪರೆ ಮತ್ತು ಮನಸಿನ ಮಾತು ಸಂದರ್ಭದಲ್ಲಿ ಎಸ್. ನಾರಾಯಣ್ ಮತ್ತು ಪ್ರವೀಣ್ ಅವರಿಗೂ ಹೀಗೆ ಆಗಿತ್ತು. ಆಕೆ ತನ್ನ ತಪ್ಪುಗಳನ್ನು ಅರಿತುಕೊಳ್ಳಬೇಕು. ನನ್ನ ಚಿತ್ರದ ಮುಂದಿನ ಪ್ರಚಾರ ಕಾರ್ಯಕ್ರಮದಲ್ಲಾದರೂ ಆಕೆ ಭಾಗವಹಿಸಲಿ ಎಂದಷ್ಟೇ ನಾನು ಬಯಸುತ್ತಿದ್ದೇನೆ ಎಂದು ಧರಣಿ ಮನವಿ ಮಾಡಿಕೊಂಡಿದ್ದಾರೆ.
ನನ್ನದೇನೂ ತಪ್ಪಿಲ್ಲ: ಐಂದ್ರಿತಾ ನಿರ್ದೇಶಕ ಧರಣಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಐಂದ್ರಿತಾ ಹೇಳಿರುವ ಮಾತಿದು. ನಾನು ಹೊಸ ವರ್ಷದ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಮೊದಲೇ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾಳೆ.
ಆಡಿಯೋ ಬಿಡುಗಡೆ ಕಾರ್ಯಕ್ರಮದ ಕುರಿತು ಮಾಹಿತಿ ಸಿಕ್ಕಿದ್ದು ಕೆಲವೇ ದಿನಗಳ ಹಿಂದೆ. ಆದರೆ ನಾನು ವರ್ಷಾಂತ್ಯದ ಕಾರ್ಯಕ್ರಮಗಳನ್ನು ಕುಟುಂಬದೊಂದಿಗೆ ಆಚರಿಸುವ ಬಗ್ಗೆ ಮೊದಲೇ ಯೋಜನೆ ರೂಪಿಸಿದ್ದೆ. ನಾನು ಟಿಕೆಟುಗಳನ್ನು ಕೂಡ ಕಾದಿರಿಸಿದ್ದರಿಂದ ಹೀಗಾಯಿತು. ಚಿತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಐಂದ್ರಿತಾ ಹೇಳಿಕೊಂಡಿದ್ದಾಳೆ.
ಧರಣಿ ಸರ್ ನನಗೆ ಫೋನ್ ಮಾಡಿದ್ದು ಹೌದು. ನಾನು ನನ್ನ ಪ್ರವಾಸದ ಯೋಜನೆಗಳನ್ನು ಅವರಿಗೆ ತಿಳಿಸಿದ್ದೆ. ಇದೊಂದು ಬಾರಿ ನನ್ನನ್ನು ಬಿಟ್ಟುಬಿಡಿ. ಮುಂದೆ ಚಿತ್ರದ ಎಲ್ಲಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದೆ. ಖಂಡಿತಾ ನಾನು ಚಿತ್ರತಂಡಕ್ಕೆ ತೊಂದರೆ ಮಾಡಿಲ್ಲ ಎಂದು ಅಪವಾದದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ.