ವಿಮರ್ಶಕರಿಂದ ಸದಾಭಿಪ್ರಾಯ ಬರದೇ ಇದ್ದರೂ 'ಮೈಲಾರಿ'ಯನ್ನು ಅಭಿಮಾನಿಗಳು ಕೈ ಬಿಡದೇ ಇರುವುದರಿಂದ ಉಬ್ಬಿ ಹೋಗಿರುವ ಶಿವರಾಜ್ ಕುಮಾರ್ ದೃಷ್ಟಿ ಈಗ ಏನಿದ್ದರೂ 'ಜೋಗಯ್ಯ' ಮ್ಯಾಲೆ. ಪ್ರೇಮ್ ಸ್ವತಃ ನಿರ್ಮಾಣ ಮಾಡಿ ನಿರ್ದೇಶಿಸುತ್ತಿರುವುದರಿಂದ ಕೊಂಚ ಹೆಚ್ಚೇ ಭರವಸೆ ಹ್ಯಾಟ್ರಿಕ್ ಹೀರೋಗಿದೆ.
ಈಗಾಗಲೇ ಸಾಕಷ್ಟು ಗಿಮಿಕ್‌ಗಳನ್ನು ಮಾಡಿರುವ ಪ್ರೇಮ್, ಆಡಿಯೋ ಬಿಡುಗಡೆ ಕುರಿತು ಕೂಡ ಹೈಪ್ ಸೃಷ್ಟಿಸಲು ಯತ್ನಿಸಿದ್ದಾರೆ. ಮಾರ್ಚ್ 6ರಂದು ಆಡಿಯೋ ಬಿಡುಗಡೆ ಮಾಡಲಾಗುತ್ತದೆ, ಅದೂ ಬೆಂಗಳೂರಿನಲ್ಲಿ ಎಂದು ಹೇಳಿಕೊಂಡಿದ್ದಾರೆ.
PR
ರಜನಿಕಾಂತ್ ಅಭಿನಯಿಸುತ್ತಾರೆ ಎಂಬ ಸುದ್ದಿಯನ್ನು ಇತ್ತೀಚೆಗಷ್ಟೇ ಓದಿದ್ದೀರಿ. ಈಗ ಮತ್ತಷ್ಟು ಗಿಮಿಕ್‌ಗಳನ್ನು ಮಾಡಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಲು ಪ್ರೇಮ್ ಯತ್ನಿಸಿದ್ದಾರೆ. ಶಿವಣ್ಣನ ಚಿತ್ರಜೀವನಕ್ಕೆ 25 ವರ್ಷ ತುಂಬುವ ದಿನ ಆಡಿಯೋ ಬಿಡುಗಡೆ ಮಾಡುವುದು, ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ಚಿತ್ರ ಬಿಡುಗಡೆ ಮಾಡುವುದು, ಚಿತ್ರದಲ್ಲಿ 3ಡಿ ಸಾಂಗು ಅಳವಡಿಕೆ ಹೀಗೆ.
2011ರ ಫೆಬ್ರವರಿ 19ರಂದು ಶಿವರಾಜ್ ಕುಮಾರ್ ಚಿತ್ರರಂಗ ಪ್ರವೇಶಿಸಿ 25 ವರ್ಷಗಳು ತುಂಬಲಿರುವ ಹಿನ್ನೆಲೆಯಲ್ಲಿ ಅಂದೇ ಆಲ್ಬಂ ರಾಜ್ಯದಾದ್ಯಂತ ಬಿಡುಗಡೆಯಾಗಬೇಕು. ಆ ದಿನ ಒಂದು ಲಕ್ಷಕ್ಕೂ ಹೆಚ್ಚು ಸಿಡಿ-ಕ್ಯಾಸೆಟ್ಟುಗಳನ್ನು ಬಿಡುಗಡೆ ಮಾಡಬೇಕು ಎನ್ನುವುದು ಪ್ರೇಮ್ ಬಯಕೆ. ಆ ಮೂಲಕ ಆಡಿಯೋ ಅಧಿಕೃತ ಬಿಡುಗಡೆ ಕಾರ್ಯಕ್ರಮವನ್ನು ಮತ್ತಷ್ಟು ರಂಗೇರಿಸುವ ತಂತ್ರ ಅವರದ್ದು.
ಹಿಟ್ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಹಾಕಿರುವ ಮಟ್ಟುಗಳಿಂದ ಕಂಗೊಳಿಸುತ್ತಿರುವ ಜೋಗಯ್ಯನ ಸಿಡಿ-ಕ್ಯಾಸೆಟ್ಟುಗಳು ಫೆಬ್ರವರಿ 19ರಿಂದಲೇ ರಾಜ್ಯದಾದ್ಯಂತ ಅಭಿಮಾನಿ ಕೇಳುಗರಿಗೆ ಲಭ್ಯವಿದೆಯಂತೆ.
ಇನ್ನು ಸಿನಿಮಾವನ್ನು ಏಪ್ರಿಲ್ 24ರಂದು ಬಿಡುಗಡೆ ಮಾಡಲಾಗುತ್ತದೆ. ಅಂದು ವರನಟ ಡಾ. ರಾಜ್‌ಕುಮಾರ್ ಹುಟ್ಟಹಬ್ಬದ ದಿನವಾಗಿರುವುದರಿಂದ ಅದರ ಲಾಭವನ್ನು ಪಡೆದುಕೊಳ್ಳುವ ಯೋಚನೆ ಪ್ರೇಮ್‌ರದ್ದು.
ಎಕ್ಸ್‌ಕ್ಯೂಸ್ ಮೀ, ಕರಿಯ ಚಿತ್ರಗಳನ್ನು ಬಿಟ್ಟರೆ ನಂತರ ಸದಾ ಗಿಮಿಕ್ಕುಗಳನ್ನೇ ಮಾಡುತ್ತಾ ಬಂದಿರುವ ಪ್ರೇಮ್ ಈಗ ಜೋಗಯ್ಯ ಮೂಲಕ ಏನು ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. 'ಜೋಗಿ'ಯ ಮುಂದುವರಿದ ಭಾಗ ಎಂದು ಹೇಳಲಾಗುತ್ತಿರುವ ಈ ಚಿತ್ರವೂ ಮತ್ತೊಂದು 'ರಾಜ್' ಅಥವಾ 'ಪ್ರೀತಿ ಏಕೆ ಭೂಮಿ ಮೇಲಿದೆ?' ಆದಲ್ಲಿ ಪ್ರೇಮ್ ಸ್ಥಿತಿ ಚಿಂತಾಜನಕವಾಗುವುದಂತೂ ಖಚಿತ.
3ಜಿ ಸಾಂಗು ಕೂಡ ಇದ್ಯಂತೆ... ಹರಿಕೃಷ್ಣ ಸಂಗೀತ ನೀಡಿರುವ ಏಳು ಹಾಡುಗಳಲ್ಲಿ ಒಂದನ್ನು 3ಡಿ ಪ್ರಕಾರಕ್ಕೆ ಮಾರ್ಪಾಡು ಮಾಡಲಾಗುತ್ತಿದೆ. ಅದಕ್ಕಾಗಿ ಮುಂಬೈಯಲ್ಲಿದ್ದೇನೆ. ನಾವು ಆಡಿಯೋ ಬಿಡುಗಡೆ ಮಾಡುವ ಹೊತ್ತಿಗೆ ಆ ಹಾಡು ಸಿದ್ಧವಾಗಲಿದೆ ಎಂದು ಹೆಚ್ಚು ವಿವರ ಬಹಿರಂಗಪಡಿಸದೆ ಪ್ರೇಮ್ ತಿಳಿಸಿದ್ದಾರೆ.
ಈ 3ಡಿ ಹಾಡನ್ನು ಒಳಗೊಂಡ ಜೋಗಯ್ಯ ಚಿತ್ರವು ಎಲ್ಲಾ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗುವುದಿಲ್ಲ. ಬೆಂಗಳೂರಿನ ಐದು ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗುತ್ತದೆ. ಅಲ್ಲಿ ವಿಶೇಷ ಕನ್ನಡಕವನ್ನು ಹಾಕಿಕೊಂಡು ಈ ಹಾಡನ್ನು ನೋಡಬೇಕಾಗುತ್ತದೆ. ಉಳಿದ ಚಿತ್ರಮಂದಿರಗಳಲ್ಲಿ ಸಾದಾ ಹಾಡುಗಳಷ್ಟೇ ಇರುತ್ತವೆ.
ಪ್ರಸಕ್ತ ಹಿಂದಿ ಚಿತ್ರವೊಂದನ್ನು 3ಡಿಯಲ್ಲಿ ಮಾಡುತ್ತಿದ್ದು, ಅದರ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಪ್ರೇಮ್ ಮುಂಬೈಗೆ ಹೋಗಿದ್ದಾರೆ. ಹಾಗಾಗಿ ಈಗಲೇ ಹೆಚ್ಚಿನ ವಿವರ ನೀಡುವುದಿಲ್ಲ. ಮುಂದಿನ ತಿಂಗಳು ಭವ್ಯ ಸಮಾರಂಭದಲ್ಲಿ ಆಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಪ್ರೇಮ್ ಪತ್ನಿ ಹಾಗೂ ನಟಿ ರಕ್ಷಿತಾ ತಿಳಿಸಿದ್ದಾರೆ.