ಕಲಿಯುಗದ ಕರ್ಣ ಖ್ಯಾತಿಯ ರೆಬೆಲ್ ಸ್ಟಾರ್ ಅಂಬರೀಷ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ನಿಜವಾಗಲಿದೆ. ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಈ ಹಿಂದೆಯೇ ಸುಳಿವು ಕೊಟ್ಟಿರುವಂತೆ 'ಸ್ವಯಂಕೃಷಿ' ಚಿತ್ರದಲ್ಲಿ ಅವರು ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸಲಿದ್ದಾರೆ.
ಇದನ್ನು ಖಚಿತಪಡಿಸಿರುವುದು ಚಿತ್ರದ ನಿರ್ದೇಶಕ, ನಾಯಕ ವೀರೇಂದ್ರ ಬಾಬು.
ಎಸ್.ಕೆ. ಎಂಟರ್ಟೈನ್‌ಮೆಂಟ್ ಹೆಸರಿನಲ್ಲಿ ವೀರೇಂದ್ರಬಾಬು ನಿರ್ಮಿಸುತ್ತಿರುವ 'ಸ್ವಯಂಕೃಷಿ' ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡು ಮತ್ತು ಅಂಬರೀಷ್ ಮುಖ್ಯಮಂತ್ರಿಯಾಗಿರುವ ಭಾಗಗಳನ್ನು ಹೊರತುಪಡಿಸಿ, ಉಳಿದೆಲ್ಲ ಚಿತ್ರೀಕರಣ ಮುಗಿದಿದೆ. ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಎಲ್ಲಾ ಹಂತದಲ್ಲೂ ಚಿತ್ರೀಕರಣ ಸುಗಮವಾಗಿ ಸಾಗಿದೆ ಎಂದು ಖುಷಿಯಲ್ಲಿರುವ ಚಿತ್ರತಂಡ ಇತ್ತೀಚೆಗಷ್ಟೇ ಪಾರ್ಟಿ ಆಯೋಜಿಸಿತ್ತು. ಈ ಸಂಭ್ರಮದಲ್ಲಿ ಬಹಳ ದಿನಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸಿದ ನಟ ಚರಣ್‌ರಾಜ್ ಪಾಲ್ಗೊಂಡಿದ್ದರು. ಶೂಟಿಂಗ್ ಸಮಯದ ಅನುಭವಗಳನ್ನು ಪತ್ರಕರ್ತರ ಮುಂದೆ ಚಿತ್ರತಂಡ ಹಂಚಿಕೊಂಡಿತು.
ವೀರೇಂದ್ರ ಬಾಬು ಅವರೇ ಚಿತ್ರದ ಕಥೆ ರಚಿಸಿ ನಾಯಕನಾಗಿ ಅಭಿನಯಿಸಿರುವುದಲ್ಲದೆ, ನಿರ್ದೇಶನ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ. ಉದ್ಯಮಿಯಾಗಿರುವ ವೀರೇಂದ್ರಬಾಬು ಈ ಚಿತ್ರದ ಮೂಲಕ ಚಿತ್ರ ನಿರ್ಮಾಣಕ್ಕೂ ಕಾಲಿಟ್ಟು 'ಸ್ವಯಂಕೃಷಿ'ಯನ್ನು ಬೆಳ್ಳಿತೆರೆಗೆ ತರಲು ಮುಂದಾಗಿದ್ದಾರೆ.
ವೀರೇಂದ್ರ ಬಾಬುವಿಗೆ ಇಲ್ಲಿ ತಮನ್ನಾ ಮತ್ತು ಬಿಯಾಂಕಾ ದೇಸಾಯಿ ನಾಯಕಿಯರು. ಅಂಬರೀಷ್, ಚರಣ್‌ರಾಜ್, ಖಳನಟ ಸುಮನ್, ಮುಮೈತ್ ಖಾನ್ ಮುಂತಾದವರು ಚಿತ್ರದ ಇತರ ಕಲಾವಿದರು.