ತಮಿಳು, ತೆಲುಗು ಓಕೆ; ಕನ್ನಡದ ಆಫರ್ ಸರಿಯಿಲ್ಲ: ಹರಿಪ್ರಿಯಾ
ಕಳೆದ ವರ್ಷವೂ ಪತ್ರಕರ್ತರ ಮಾತಿಗೆ ಸಿಕ್ಕಿದ್ದ ಹರಿಪ್ರಿಯಾ ಇದೇ ಮಾತನ್ನಾಡಿದ್ದರು. ತಮಿಳು ಮತ್ತು ತೆಲುಗು ಚಿತ್ರರಂಗ ನನ್ನ ಮೇಲೆ ತೋರಿಸುವಷ್ಟು ಪ್ರೀತಿ ಕನ್ನಡ ಚಿತ್ರರಂಗ ತೋರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅದನ್ನೀಗ ಪುನರಾವರ್ತಿಸಿದ್ದಾರೆ. ಮನೆಯಲ್ಲಿ ಕೂತರೂ ಪರವಾಗಿಲ್ಲ, ಅತ್ಯುತ್ತಮ ಚಿತ್ರಕಥೆ ಇಲ್ಲದೇ ಇದ್ದರೆ ಯಾವ ಸಿನಿಮಾನೂ ಒಪ್ಪಿಕೊಳ್ಳೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
WD
ಯು2 ವಾಹಿನಿಯ ನಿರೂಪಕ ಆನಂದ್ ಜತೆ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗಲೇ 'ಮನಸುಗಳ ಮಾತು ಮಧುರ' ಎಂದಿದ್ದ ಹರಿಪ್ರಿಯಾ, ಅದು ಬಿಡುಗಡೆಯಾಗುವ ಮೊದಲೇ ಹಲವು ಚಿತ್ರಗಳಲ್ಲಿ ಅವಕಾಶ ಪಡೆದುಕೊಂಡವರು. ಇಷ್ಟೊಂದು ಸುಂದರ ಮೈಮಾಟದ ಕನ್ನಡದ ಹುಡುಗಿ ಚಿತ್ರರಂಗಕ್ಕೆ ಬರದೆ ಎಷ್ಟೊಂದು ಕಾಲವಾಯಿತು ಎಂದು ಕಣ್ರೆಪ್ಪೆ ಮುಚ್ಚದೆ ನೋಡುವಷ್ಟು ಜನಪ್ರಿಯತೆ ಬಂದಿದ್ದ ಕಾಲವದು.
ಆದರೆ ಚಿಕ್ಕಬಳ್ಳಾಪುರದ ಚೆಲುವೆಗೆ ಬಂದ ಅವಕಾಶಗಳು ಟೊಳ್ಳಾಗಿದ್ದವು. ಗಾಡ್‌ಫಾದರ್ ಇಲ್ಲದೇ ಇದ್ದ ಕಾರಣ ಸಿಕ್ಕ ಸಿಕ್ಕ ಅವಕಾಶಗಳನ್ನು ಒಪ್ಪಿಕೊಂಡರು. ವಸಂತಕಾಲ, ಈ ಸಂಭಾಷಣೆ, ಮಳೆ ಬರಲಿ ಮಂಜೂ ಇರಲಿ, ಕಳ್ಳರ ಸಂತೆ, ಚೆಲುವೆಯೇ ನಿನ್ನ ನೋಡಲು.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದರು.
ಎಲ್ಲವೂ ಫ್ಲಾಪ್. ಕಳ್ಳರ ಸಂತೆ ಒಂದು ಬಿಟ್ಟರೆ ಅವರಿಗೆ ಕನಿಷ್ಠ ಹೆಸರನ್ನು ಯಾವ ಸಿನಿಮಾವೂ ತಂದು ಕೊಡಲಿಲ್ಲ. ಇಂತಿಪ್ಪ ಹೊತ್ತಿನಲ್ಲಿ ಅತ್ತ ತಮಿಳರು, ತೆಲುಗರು ಕನ್ನಡದ ಹುಡುಗಿಯ ಮೇಲೆ ಕಣ್ಣು ಹಾಕಿದರು. ಎತ್ತಿಕೊಂಡು ಹೋಗುವಲ್ಲಿಯೂ ಯಶಸ್ವಿಯಾದರು. ಈಗ ಅಲ್ಲೇ ಅವರು ಛಾಪೊತ್ತಿದ್ದಾರೆ. ಕನ್ನಡಿಗರು ತಿರಸ್ಕರಿಸಿದರೂ ಪರಭಾಷಿಗರು ಬೇಡವೆನ್ನಲಿಲ್ಲ ಎಂದು ಬೀಗುತ್ತಿದ್ದಾರೆ.
ಕನಗಾವೆಲ್ ಕಾಕಾ, ವಲ್ಲಾಕೋಟೈ ಎಂಬ ತಮಿಳು, ತಕಿಟ ತಕಿಟ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ ಹರಿಪ್ರಿಯಾಗೆ ಈಗ ಆ ಎರಡೂ ಚಿತ್ರರಂಗದಲ್ಲಿ ಸಕತ್ ಡಿಮಾಂಡ್. ಚೇರನ್ ನಾಯಕನಾಗಿರುವ ಮುರನ್ ಎಂಬ ತಮಿಳು ಮತ್ತು ತೆಲುಗಿನ ಪಿಲ್ಲಾ ಜಮೀನ್ದಾರ್ ಎಂಬೆರಡು ಚಿತ್ರಗಳು ಸಿಕ್ಕಿರುವುದಕ್ಕಿಂತಲೂ, ಅವುಗಳಲ್ಲಿನ ಆಕೆಯ ಪಾತ್ರಕ್ಕಿರುವ ಮಹತ್ವವೇ ಇದಕ್ಕೆ ಸಾಕ್ಷಿ.
ಈ ಬಗ್ಗೆ ಮಾತಿಗಿಳಿದರೆ, ನನಗೆ ಕಥೆಯೇ ಮುಖ್ಯ. ಚಿತ್ರಕಥೆ ಚೆನ್ನಾಗಿದ್ದರೆ ಮಾತ್ರ ನಟಿಸಲು ಒಪ್ಪಿಕೊಳ್ಳುತ್ತೇನೆ. ತಮಿಳು ಮತ್ತು ತೆಲುಗು ನಿರ್ದೇಶಕರಿಂದ ನನಗೆ ಸಿಗುತ್ತಿರುವ ಚಿತ್ರಕಥೆಗಳು ನನಗೆ ಕನ್ನಡ ಚಿತ್ರರಂಗದಿಂದ ಸಿಗುತ್ತಿಲ್ಲ. ಹಾಗಾಗಿ ಉತ್ತಮ ಬ್ಯಾನರುಗಳಲ್ಲಿ ಮಾತ್ರ ನಟಿಸಲು ನಿರ್ಧರಿಸಿದ್ದೇನೆ. ಮನೆಯಲ್ಲಿ ಕೂತರೂ ಪರವಾಗಿಲ್ಲ. ಕಣ್ಮುಚ್ಚಿ ಯಾವುದೇ ಚಿತ್ರ ಒಪ್ಪಿಕೊಳ್ಳಲಾರೆ ಎನ್ನುತ್ತಾರೆ.
ಈಗ ಕನ್ನಡದಲ್ಲೂ ಎರಡು ಅವಕಾಶಗಳು ಸಿಕ್ಕಿವೆ. 'ನಂದೇ' ಮತ್ತು 'ಸ್ವಾಮಿ ಮಣಿಕಂಠ'. ಇವೆರಡರಲ್ಲೂ ಸುಖಾಸುಮ್ಮನೆ ನಟಿಸಲು ಹರಿಪ್ರಿಯಾ ಒಪ್ಪಿಕೊಂಡಿಲ್ವಂತೆ. ಈ ಚಿತ್ರಗಳ ಬಿಡುಗಡೆಯ ನಂತರವಾದರೂ ಕನ್ನಡದಲ್ಲಿ ತನಗೆ ಬೇಡಿಕೆ ಹೆಚ್ಚಬಹುದು ಎಂಬ ನಿರೀಕ್ಷೆಯೇ ಇದಕ್ಕೆ ಕಾರಣ.
ಈ ನಡುವೆ ಸಾಕಷ್ಟು ಕಲಿಯಲು ಆಕೆ ಒತ್ತು ನೀಡುತ್ತಿದ್ದಾರೆ. ತನ್ನಲ್ಲಿ ಕಂಡುಕೊಳ್ಳಬಹುದಾದ ಸುಧಾರಣೆಗಳಿಗೆ ಮನಸ್ಸು ಮಾಡುತ್ತಿದ್ದಾರೆ. ಸ್ವತಃ ಡಬ್ಬಿಂಗ್ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
'ಈ ಹಿಂದೆ ನಾನು ನನ್ನ ಪಾತ್ರಗಳಿಗೆ ಡಬ್ ಮಾಡಲು ಹೊರಟಾಗ ಕೆಲವು ಬಾರಿ ನಿರ್ದೇಶಕರಿಂದ ಬೇಡವೆಂದೋ ಅಥವಾ ನನಗೆ ಕಾಲಾವಕಾಶ ಇಲ್ಲದೆ ತಪ್ಪಿ ಹೋಗುತ್ತಿದ್ದವು. ಆದರೆ ನನ್ನ ಕನ್ನಡದ ಹೊಸ ಚಿತ್ರ ನಂದೇಯಲ್ಲಿ ನಾನೇ ಧ್ವನಿ ಕೊಟ್ಟಿದ್ದೇನೆ. ನನ್ನ ಧ್ವನಿಯನ್ನು ಪರದೆಯಲ್ಲಿ ಕೇಳಲು ಕಾತರದಿಂದಿದ್ದೇನೆ' ಎಂದು ಹರಿಪ್ರಿಯಾ ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಬಹುತೇಕ ಆಕೆ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದಾರಂತೆ. ಪರದೆಯ ಆಚೆ ಹೇಗಿರುತ್ತೇನೋ, ಅದೇ ರೀತಿ ಚಿತ್ರದಲ್ಲೂ ಕಾಣಿಸಿಕೊಳ್ಳಲು ನಾನು ಬಯಸುತ್ತೇನೆ. ಆ ಚಿತ್ರ ಬಿಡುಗಡೆಯಾಗುವುದಕ್ಕೆ ಕಾಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.