ಎಸ್. ನಾರಾಯಣ್ ನಿರ್ದೇಶನದ 'ದುಷ್ಟ' ಚಿತ್ರದ ನಾಯಕ ಪಂಕಜ್ ಹಾಗೂ ನಾಯಕಿ ಸುರಭಿಗೆ ಆಕ್ಸಿಡೆಂಟ್ ಆಗಿದೆಯಂತೆ.
ಇತ್ತೀಚೆಗೆ ಶೂಟಿಂಗ್ ಸಮಯದಲ್ಲಿ ಕನ್ನಡ ನಟರು ಅಪಘಾತಕ್ಕೆ ಈಡಾಗುತ್ತಿರುವುದು ಜಾಸ್ತಿಯಾಗುತ್ತಿದೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ. ಇದನ್ನು ಅಜಾಗರೂಕತೆ ಎನ್ನಬೇಕೋ, ನಿರ್ಲಕ್ಷ್ಯ ಎನ್ನಬೇಕೋ ಅಥವಾ ಅಚಾನಕ್ ಘಟನೆಗಳು ಎಂದು ಕರೆಯಬೇಕೋ ತಿಳಿಯುತ್ತಿಲ್ಲ.
ಬಿಡಿ, ಇದು ನಡೆದಿರುವುದು ಭದ್ರಾವತಿ ಬಳಿಯ ಬೋಂದಿ ಅಣೆಕಟ್ಟು ಸಮೀಪ. ಈ ಪ್ರದೇಶದಲ್ಲಿ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು.
ನಾರಾಯಣ್ ಪುತ್ರ ಪಂಕಜ್ ನಾಯಕಿ ಸುರಭಿಯನ್ನು ಬೈಕಿನ ಹಿಂಬದಿಯಲ್ಲಿ ಕೂರಿಸಿಕೊಂಡು ಹಾಡುತ್ತಾ ಬರುವ ದೃಶ್ಯವದು. ಛಾಯಾಗ್ರಾಹಕ ವಾಲಿ ಇದನ್ನು ಚಿತ್ರೀಕರಿಸಿಕೊಳ್ಳುತ್ತಿದ್ದರು.
ಆಗ ಇದ್ದಕ್ಕಿದ್ದಂತೆ ನಾಯಕ-ನಾಯಕಿ ಮೋಟಾರ್ ಸೈಕಲ್ನಿಂದ ಮುಗ್ಗರಿಸಿ ಬಿದ್ದರು. ಇದರಿಂದ ಇಬ್ಬರ ಕಾಲುಗಳಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಹೆಚ್ಚಿನ ಅಪಾಯವೇನೂ ಆಗಿಲ್ಲ, ಪಾರಾಗಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ತಕ್ಷಣವೇ ನಾಯಕ ಹಾಗೂ ನಾಯಕಿಯನ್ನು ಭದ್ರಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ಅಂದಿನ ಶೂಟಿಂಗನ್ನು ನಂತರ ರದ್ದುಪಡಿಸಲಾಯಿತು. ಈಗ ಚಿತ್ರೀಕರಣ ಪುನರಾರಂಭಗೊಂಡಿದೆ.