ವಿಮರ್ಶಕರಿಂದ ಚುಚ್ಚಿಸಿಕೊಂಡರೂ ಪ್ರೇಕ್ಷಕರು ಮೆಚ್ಚಿರುವ 'ಮೈಲಾರಿ' ಕೋಟಿ ಕೋಟಿ ರೂಪಾಯಿಗಳನ್ನು ಸುರಿಸುತ್ತಿದೆ. ಸಹಜವಾಗಿಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಮಾಧಾನದ ನಿಟ್ಟುಸಿರಿಗೂ ಮಿಗಿಲಾದ ಸಂತಸವನ್ನು ಅನುಭವಿಸುತ್ತಿದ್ದಾರೆ. ಇದು ನನ್ನ ಗೆಲುವಲ್ಲ, ನಿರ್ದೇಶಕ ಆರ್. ಚಂದ್ರು ಗೆಲುವು ಎಂದು ಹೊಗಳಿದ್ದಾರೆ.
ಶಿವಣ್ಣ ಯಾವತ್ತೂ ತನ್ನಿಂದಾಗಿ ಚಿತ್ರವೊಂದು ಗೆದ್ದಿದೆ ಎಂದು ತಪ್ಪಿಯೂ ಹೇಳಿದವರಲ್ಲ. ಸೋಲಿಗೂ ಅದೇ ಮಾತು. ಯಾರನ್ನೂ ದೂರುವ ಜಾಯಮಾನ ಅವರದ್ದಲ್ಲ. ತನ್ನಿಂದ ಸಾಧ್ಯವಾಗುವ ಯಾವುದೇ ಸಹಕಾರವನ್ನು ಮಾಡದೆ ಸುಮ್ಮನೆ ಕುಳಿತದ್ದಂತೂ ಇಲ್ಲವೇ ಇಲ್ಲ.
PR
ಮೈಲಾರಿ ಯಶಸ್ಸಿನ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಿರ್ದೇಶಕ ಚಂದ್ರು, ನಿರ್ಮಾಪಕರು ಮತ್ತು ಇತರರಿಗೆ ಧನ್ಯವಾದ ಅರ್ಪಿಸಿದರು. ಎಲ್ಲರ ಕಾರಣದಿಂದ ಚಿತ್ರ ಗೆದ್ದಿದೆ, ಇನ್ನಷ್ಟು ಚಿತ್ರಗಳಲ್ಲಿ ನಟಿಸುವ ಸಾಮರ್ಥ್ಯ ನನಗೆ ಮೈಲಾರಿಯಿಂದಾಗಿ ಬಂದಿದೆ ಎಂದರು.
ಈ ಚಿತ್ರ ಗೆದ್ದಿರುವುದರ ಕೀರ್ತಿ ಇಡೀ ತಂಡಕ್ಕೆ ಸಲ್ಲಬೇಕು. ನಿರ್ದೇಶಕ ಚಂದ್ರು ಒಂದು ಅತ್ಯುತ್ತಮ ಚಿತ್ರಕಥೆಗಾಗಿ ಕಠಿಣ ಶ್ರಮವಹಿಸಿದ್ದಾರೆ. ಎಲ್ಲವನ್ನೂ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಚಿತ್ರದ ಪ್ರಚಾರಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ನಿರ್ಮಾಪಕರದ್ದೂ ದೊಡ್ಡ ಮನಸ್ಸು ಎಂದು ಶಿವಣ್ಣ ಶ್ಲಾಘಿಸಿದರು.
ಕಳೆದ ಮೂರು ವರ್ಷದಿಂದ ನನಗೆ ಗೆಲುವಿನ ಬರ ಇತ್ತು. ಜೋಗಿಯ ನಂತರ ನಾನು ಹಿಟ್ ಕೊಟ್ಟಿರಲಿಲ್ಲ. ಅದನ್ನು ನೀಗಿಸಿದ್ದು ಚಂದ್ರು. ನನ್ನನ್ನು ಸೋಲಿನ ದವಡೆಯಿಂದ ಪಾರು ಮಾಡಿದ ಮತ್ತು ಹೆಸರು ತಂದುಕೊಟ್ಟ ಚಿತ್ರ ಮೈಲಾರಿ ಎಂದು ಹೇಳಲು ಸಂತಸವಾಗುತ್ತಿದೆ. ಇನ್ನು ನೂರು ಚಿತ್ರಗಳಲ್ಲಿ ಅಭಿನಯಿಸುವ ಶಕ್ತಿ ನನಗೆ ಬಂದಿದೆ ಎಂದರು.
ಎರಡೇ ವಾರದಲ್ಲಿ ಐದು ಕೋಟಿ... ಮೈಲಾರಿ ಮೊದಲೆರಡು ವಾರಗಳಲ್ಲಿ ರಾಜ್ಯದಾದ್ಯಂತದ ಚಿತ್ರಮಂದಿರಗಳಲ್ಲಿ ಗಳಿಸಿರುವ ಒಟ್ಟು ಮೊತ್ತ 3.60 ಕೋಟಿ ರೂಪಾಯಿ. ಒಟ್ಟಾರೆ ಇದುವರೆಗೆ ಮೈಲಾರಿಯಿಂದ ಬಂದಿರುವ ಹಣ ಐದು ಕೋಟಿ ರೂಪಾಯಿಗಳು.
ಸ್ಯಾಟಲೈಟ್ ಹಕ್ಕುಗಳ ಮಾರಾಟ, ಆಡಿಯೋ ಮಾರಾಟದ ಜತೆ ಇದುವರೆಗೆ ಬಂದಿರುವ ಹಣವನ್ನು ಸೇರಿಸಿದರೆ ಮೈಲಾರಿಗೆ ಸುರಿದ ಹಣ ವಾಪಸ್ ಬಂದಿದೆ. ನಾವೇನು ಸುಳ್ಳು ಹೇಳುತ್ತಿಲ್ಲ. ಎಲ್ಲಾ ನಿರ್ಮಾಪಕರಂತೆ ಲಾಭವಾಗಿಲ್ಲ ಎಂದು ಹೇಳುತ್ತಿಲ್ಲ. ನಿಜಕ್ಕೂ ನಮಗೆ ಲಾಭವಾಗಿದೆ. ನಾವು ಗೆದ್ದಿದ್ದೇವೆ ಎಂದು ನಿರ್ಮಾಪಕ ಶ್ರೀನಿವಾಸ್ ಹೇಳಿಕೊಂಡರು.