ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್ 'ಬಾಸ್'ಗೆ ಮೈಲಾರಿ ಪ್ರತಿಭಟನೆ; ನೀವು ರೆಡಿನಾ? (Boss | Raghuraj | Darshan | Navya Nair)
ಸುದ್ದಿ/ಗಾಸಿಪ್
Bookmark and Share Feedback Print
 
ಮಾಸ್ ಪ್ರೇಕ್ಷಕರ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬಾಸ್' ಆಗಿರುವುದು ಗೊತ್ತೇ ಇದೆ. ಸಂಕ್ರಾಂತಿಯ ಶುಭದಿನದಂದು (ಜನವರಿ 14) ಅವರೀಗ ಬಹುತೇಕ ಪ್ರತಿಯೊಬ್ಬರ ಊರುಗಳಿಗೂ ಬರುತ್ತಿದ್ದಾರೆ. ಅದ್ಧೂರಿಯಾಗಿ ಎಂಟ್ರಿ ಪಡೆಯುತ್ತಿದ್ದಾರೆ. ಇದು ಸ್ವತಃ 'ಮೈಲಾರಿ' ಮೇಲೂ ಪರಿಣಾಮ ಬೀರಿದೆ. ಪ್ರತಿಭಟನೆಯೂ ನಡೆದು ಹೋಗಿದೆ.

ಹಾಗೆ ನೋಡಿದರೆ ನವ್ಯಾ ನಾಯರ್ ನಾಯಕಿಯಾಗಿರುವ ಈ ಚಿತ್ರದ ಜತೆ ದರ್ಶನ್‌ಗೆ ಫೈಟ್ ನೀಡಲು ಹೊಸಬರು ಯಾರೂ ಫೀಲ್ಡಿನಲ್ಲಿಲ್ಲ. ಹಾಗಾಗಿ ಬಾಸ್ ನಿರಾತಂಕವಾಗಿ ಸಾಗುವುದು ಖಚಿತ. ಆದರೆ ಬಾಸ್‌ನಿಂದಾಗಿ ಕೆಲ ವಾರಗಳ ಹಿಂದೆ ಬಿಡುಗಡೆಯಾದ ಸೂಪರ್, ಮೈಲಾರಿ ಚಿತ್ರಗಳ ಗಳಿಕೆ ಕಡಿಮೆಯಾಗಬಹುದು ಎಂಬುದು ಚಿಂತೆಗೆ ಕಾರಣವಾಗಿದೆ. ಸಹಜವಾಗಿಯೇ ಒಂದಿಷ್ಟು ಗೊಂದಲಗಳು ಕಾಣಿಸಿಕೊಂಡಿವೆ.
PR

ಬರೋಬ್ಬರಿ 135 ಚಿತ್ರಮಂದಿರಗಳಲ್ಲಿ ಬಾಸ್ ಬಿಡುಗಡೆಯಾಗುತ್ತಿದೆ. ಆರಂಭದಲ್ಲಿ ಸಿಕ್ಕಿದಷ್ಟು ಬಾಚಿಕೊಳ್ಳುವ ನೀತಿ ಎಲ್ಲಾ ನಿರ್ಮಾಪಕರಂತೆ ರಮೇಶ್ ಯಾದವ್ ಅವರದ್ದು. ಇದು ಇತ್ತೀಚಿನ ದಿನಗಳಲ್ಲಿ ಕನ್ನಡ ನಿರ್ಮಾಪಕರು ಆವಾಹಿಸಿಕೊಂಡಿರುವುದು ಕೂಡ ಹೌದು.

132 ಪ್ಲಸ್ ಮೂರು ಚಿತ್ರಮಂದಿರಗಳಲ್ಲಿ ಬಾಸ್ ಬಿಡುಗಡೆಯಾಗಲಿರುವುದರಿಂದ ಕನ್ನಡ ಚಿತ್ರವೊಂದು ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದಾಖಲೆ ದರ್ಶನ್ ಪಾಲಾಗುತ್ತಿದೆ. ಗಳಿಕೆಯಲ್ಲೂ ದಾಖಲೆ ನಿರ್ಮಿಸುತ್ತದೆ ಎನ್ನುವುದು ಗಾಂಧಿನಗರದ ನಿರೀಕ್ಷೆ.

ಚಿತ್ರಕ್ಕೆ ಅಬ್ಬರದ ಪ್ರಚಾರವೂ ಇದೆ. ಜತೆಗೆ ಹೊಸ ನಿರ್ದೇಶಕ ಬೇರೆ. ಈಗಿನ ಹಾಟ್ ಕೇಕ್ ವಿ. ಹರಿಕೃಷ್ಣ ಸಂಗೀತದ ಹಾಡುಗಳಂತೂ ಸೂಪರ್ ಹಿಟ್ ಆಗಿವೆ. ನಿರ್ಮಾಪಕರು ಹಣದ ವಿಚಾರದಲ್ಲಿ ಚೌಕಾಶಿ ಮಾಡದೇ ಇದ್ದುದರಿಂದ ಬೇಕಾದಂತೆ ಚಿತ್ರೀಕರಣ ನಡೆಸಲು ಸಾಧ್ಯವಾಗಿದೆ. ಹಿಟ್ ಜೋಡಿಯೂ ಚಿತ್ರದಲ್ಲಿದೆ. ಸಹಜವಾಗಿಯೇ ನಿರ್ದೇಶಕ ಆರ್. ರಘುರಾಜ್ ನಿರೀಕ್ಷೆಯೊಂದಿಗೆ ಆತಂಕವನ್ನೂ ಎದುರಿಸುತ್ತಿದ್ದಾರೆ.

ಅತ್ತ ದರ್ಶನ್ ಮಾತ್ರ ನಿರಾಳರಾಗಿದ್ದಾರೆ. ಖಂಡಿತಾ ಈ ಚಿತ್ರ ಗೆದ್ದೇ ಗೆಲ್ಲುತ್ತೆ ಎನ್ನುವ ಭರವಸೆ ಅವರಲ್ಲಿದೆ.

ಬಾಸ್ ವರ್ಸಸ್ ಮೈಲಾರಿ...
ಬಾಸ್ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅತ್ಯುತ್ತಮ ಕಲೆಕ್ಷನ್ ಕಾಣುತ್ತಿರುವ ಮೈಲಾರಿ ಪ್ರದರ್ಶನವನ್ನು ಕಡಿಮೆ ಮಾಡಲಾಗಿದೆ ಎಂದು ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆದಿರುವುದು ವರದಿಯಾಗಿದೆ.

ವೀರೇಶ್ ಚಿತ್ರಮಂದಿರದಲ್ಲಿ ಪ್ರಸಕ್ತ ಓಡುತ್ತಿರುವುದು ಮೈಲಾರಿ. ನವೆಂಬರ್ 14ರಿಂದ ಇಲ್ಲಿ ಮೈಲಾರಿಯ ಎರಡು ಶೋಗಳನ್ನು ರದ್ದುಪಡಿಸಿ, ಆ ಜಾಗಕ್ಕೆ ಬಾಸ್ ತರುವ ಯತ್ನಗಳು ನಡೆಯುತ್ತಿದೆ ಎಂದು ಆರೋಪಿಸಿ ಮೈಲಾರಿ ನಿರ್ಮಾಪಕರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ನಡೆಸಿರುವುದು ಕರ್ನಾಟಕ ರಾಜ್ಯ ಚಲನಚಿತ್ರ ಮಂಡಳಿಯೆದುರು. ಮೈಲಾರಿ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಚಿತ್ರತಂಡದ ಜತೆ ಪ್ರತಿಭಟನೆ ನಡೆಸಿದಾಗ ಇದಕ್ಕೆ ನಿರ್ದೇಶಕ ಅಗ್ನಿ ಶ್ರೀಧರ್, ನಿರ್ಮಾಪಕ ರವೀಂದ್ರ ಮತ್ತು ಅಭಿಮಾನಿಗಳು ಕೂಡ ಸಾಥ್ ನೀಡಿದ್ದಾರೆ. ವಿವಾದವನ್ನು ರಾಜಿ ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ