ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರುತ್ತಿರುವುದರಿಂದ ಬಡವರಿಗೆ ಬದುಕು ಹೊರೆಯಾಗಿದೆ ಎಂದು ಅಭಿಪ್ರಾಯ ಪಟ್ಟ ಸಂಗೀತದ ದಂತಕತೆ ಕೆ.ಜೆ. ಯೇಸುದಾಸ್, ಬಡತನದಿಂದ ತತ್ತರಿಸುತ್ತಿದ್ದರೂ ಪುರುಷರು ಮದ್ಯಪಾನ ಮಾಡಿ ತಮ್ಮ ಕುಟುಂಬವನ್ನು ಇನ್ನೂ ಸಂಕಷ್ಟಕ್ಕೆ ಸಿಲುಕಿಸುತ್ತಿರುವುದಕ್ಕೆ ಮನನೊಂದು, ಅಗತ್ಯ ವಸ್ತುಗಳನ್ನು ಕನಿಷ್ಠ ಲಾಭಕ್ಕೆ ಮಾರಾಟ ಮಾಡಿ ಎಂದು ವ್ಯಾಪಾರಿಗಳಿಗೆ ಮೊರೆಯಿಟ್ಟಿದ್ದಾರೆ.
ಈರುಳ್ಳಿ ಸಿಪ್ಪೆ ಸುಲಿಯುವಾಗ ಕಣ್ಣೀರು ತರಿಸುವುದು ನಮಗೆ ಗೊತ್ತಿರುವ ವಿಚಾರ. ಆದರೆ ಇತ್ತೀಚೆಗೆ ಈರುಳ್ಳಿ ಖರೀದಿಸಲು ಹೋಗುವಾಗಲೇ ಜನ ಕಣ್ಣೀರಿಡುತ್ತಿದ್ದಾರೆ ಎಂದರು.
ಇಂತಹ ಪರಿಸ್ಥಿತಿಗೆ ಬಡವರು ಏನು ಮಾಡಬೇಕು. ಏಕೆ ಹೀಗೆಲ್ಲ ನಡೆಯುತ್ತಿದೆ. ನನಗನಿಸುತ್ತಿದೆ, ಹೆಚ್ಚು ಲಾಭ ಮಾಡುವ ಮೊದಲು ವ್ಯಾಪಾರಿಗಳು ಎರಡೆರಡು ಬಾರಿ ಯೋಚಿಸಬೇಕು. ಭೋಗ ಸಾಮಗ್ರಿಗಳ ಬೆಲೆ ಹೆಚ್ಚಿಸಿದರೆ ಪರವಾಗಿಲ್ಲ, ಆದರೆ ಬಡವರ ಆಹಾರದ ಮೇಲೆ ಸಲ್ಲದು ಎಂದರು.
ಬಡ ವರ್ಗದವರಲ್ಲಿ ಹೆಚ್ಚುತ್ತಿರುವ ಮದ್ಯವ್ಯಸನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ನನಗೆ ಆ ಪದವನ್ನು ಬಳಸಲೂ ಅಸಹ್ಯವಾಗುತ್ತಿದೆ ಎಂದರು. ಮುಂಜಾನೆಯಿಂದ ರಾತ್ರಿಯವರೆಗೆ ಕುಡಿತದಲ್ಲೇ ನಿರತರಾಗಿರುವ ಇವರು, ತಮ್ಮ ಕುಟುಂಬದ ಬಗ್ಗೆ ಕಿಂಚಿತ್ತೂ ಚಿಂತಿಸುವುದಿಲ್ಲ. ಇದು ನಿಜವಾಗಿಯೂ ದುರಂತ ಎಂದರು.
ಅನಾರೋಗ್ಯದಿಂದ ನರಳುತ್ತಿರುವವರಿಗೆ ನೆರವು ನೀಡಲು ಫೆಬ್ರವರಿ 16ರಂದು ರೋಟರಿ ಸಂಸ್ಥೆ ಆಯೋಜಿಸಿರುವ, ದಕ್ಷಿಣ ಭಾರತದ ಶ್ರೇಷ್ಠ ಸಂಗೀತಜ್ಞರಿಂದ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯೇಸುದಾಸ್ ಹಾಡಲಿದ್ದಾರೆ.
ಪದ್ಮಭೂಷಣ ಕೆ.ಜೆ. ಯೇಸುದಾಸ್ ಅವರ 71ನೇ ಹುಟ್ಟುಹಬ್ಬ ಜನವರಿ 10ರಂದು ನಡೆದಿದ್ದು, ಆ ಪ್ರಯುಕ್ತ ವಿವಿಧೆಡೆ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು.