ಅಂತೂ ಇಂತೂ ಶರಣ್ಗೂ ನಾಯಕನಾಗೋ ಕಾಲ ಬಂದೇ ಬಿಡ್ತು. ಹಾಸ್ಯ ನಟರೆಲ್ಲ ನಾಯಕರಾಗೋದು, ನಿರ್ದೇಶಕರು ನಿರ್ಮಾಪಕರಾಗೋದು, ನಿರ್ಮಾಪಕರು ನಾಯಕನಾಗೋದು, ಸಂಗೀತಗಾರನಾಗೋದು ಸಾಮಾನ್ಯ. ಅದೇ ಸಾಲಿಗೆ ಶ್ರುತಿ ಸಹೋದರ ಕಚಗುಳಿ ವೀರ ಶರಣ್ ಸೇರ್ಪಡೆಯಾಗಿದ್ದಾರೆ.
ಅವರದ್ದೀಗ ಎರಡೆರಡು ಪಾತ್ರ. ಮೊದಲನೆಯದ್ದು ನಾಯಕ. ಎರಡನೆಯದ್ದು ನಿರ್ಮಾಪಕ. ಹೌದು, ಅವರು ತನ್ನದೇ ಬ್ಯಾನರಿನಡಿಯಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಅದರಲ್ಲಿ ಅವರೇ ನಾಯಕ.
ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಂತೆ. ಆದರೆ, ಆದಷ್ಟು ಹೊಸ ಮುಖಗಳನ್ನು ಹಾಕಿಕೊಂಡು ಸಿನಿಮಾ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಶರಣ್. ಸಹೋದರಿ ಶ್ರುತಿ ಕೂಡ ಮಹತ್ವದ ಪಾತ್ರ ಮಾಡುವ ಸಾಧ್ಯತೆಗಳಿವೆ.
'ಲಡ್ಡು ಸಿನಿಮಾ ಹೌಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ ಚಿತ್ರ. ಆ ಹೆಸರಿಗೆ ಕಾರಣ ಶರಣ್ ಮಗ. ಆತನನ್ನು ಪ್ರೀತಿಯಿಂದ ಲಡ್ಡು ಎಂದು ಶರಣ್ ಕರೆಯುತ್ತಾರಂತೆ. ಆದ್ದರಿಂದ ಅದೇ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.
ಚಿತ್ರ ನಿರ್ಮಾಣ ಮಾಡುವ ಧೈರ್ಯ ದಿಢೀರ್ ಆಗಿ ಬಂದದ್ದು. ಇದಕ್ಕೆ ನನ್ನ ಗೆಳೆಯರ ಸಾಥ್ ಹಾಗೂ ಒಂದು ಉತ್ತಮ ಕಥೆ ಸಿಕ್ಕಿದ್ದು ಕಾರಣ. ಹೊಸಬರನ್ನೇ ಹಾಕಿಕೊಂಡು ಚಿತ್ರ ಮಾಡಲಿದ್ದೇನೆ. ನಿರ್ದೇಶಕರೂ ಹೊಸಬರಾಗಿರುತ್ತಾರೆ ಎಂದು ಕ್ಲೂ ಕೊಟ್ಟಿದ್ದಾರೆ ಶರಣ್.
ತಂತ್ರಜ್ಞರು, ನಾಯಕಿ ಹಾಗೂ ಉಳಿದ ತಾರಾಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕು. ಖಂಡಿತಾ ಇದೊಂದು ಹಾಸ್ಯ ಚಿತ್ರ. ಕುಟುಂಬವಿಡೀ ಜತೆಗೆ ಕುಳಿತು ನೋಡಬಹುದಾದ ಚಿತ್ರ. ಸದ್ಯಕ್ಕೆ ಚಿತ್ರಕಥೆ ಸಿದ್ಧವಾಗುತ್ತಿದೆ ಎಂದು 'ಕರ್ಪೂರದ ಗೊಂಬೆ' ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧಿಯಾಗಿರುವ ಶರಣ್ ಹೇಳಿಕೊಂಡಿದ್ದಾರೆ.