ಗಾನಬಜಾನಾ ಕಮರ್ಷಿಯಲ್ ಹಿಟ್ ಆಗದಿದ್ದರೂ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ತರುಣ್ ಚಂದ್ರ ಒತ್ತಿರುವುದು ಸ್ಪಷ್ಟವಾಗುತ್ತಿದೆ. ಹಾಗೆ ನೋಡಿದರೆ, ಈ ಹಿಂದಿನ ಚಿತ್ರಗಳಲ್ಲೂ ಅವರು ತನ್ನ ಪಾತ್ರಕ್ಕೆ ಮೋಸ ಮಾಡಿದವರಲ್ಲ.
ಈಗ ಸುದ್ದಿಯಾಗಿರುವುದು ಅವರ ಹೊಸ ಚಿತ್ರ. 'ಲಿಫ್ಟ್ ಕೊಡ್ಲ' ಮತ್ತು 'ಸರ್ಕಸ್' ಚಿತ್ರಗಳಲ್ಲಿ ನಟಿಸಿದ್ದ ನಟಿ ಅರ್ಚನಾ ಗುಪ್ತಾ ನಾಯಕಿಯಾಗಿರುವ ಹೊಸ ಚಿತ್ರವೊಂದಕ್ಕೆ ತರುಣ್ ಈಗ ನಾಯಕ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಹತ್ತು ದಿನಗಳು ಮುಗಿದು ಹೋಗಿವೆ.
ಆದರೂ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಮುಂಬೈ ಮೂಲಕ ಇಮಾಯತ್ ಖಾನ್ ಇದರ ನಿರ್ದೇಶಕ. ನೀಲ್ ಸಂಗೀತ ನೀಡುತ್ತಿದ್ದಾರೆ. ಗಾನಬಜಾನಾ ಬಿಡುಗಡೆಯಾದ ನಂತರ ತರುಣ್ ಸಹಿ ಹಾಕಿದ ಮೊದಲ ಮತ್ತು ಕೊನೆಯ ಚಿತ್ರವಿದು.
ಹಾಗೆಂದು ಈ ವರ್ಷ ಆಫರುಗಳು ಬಂದೇ ಇಲ್ಲವೆಂದು ಅರ್ಥವಲ್ಲ. ಅವರೀಗ ಅಳೆದು ತೂಗಿ ಚಿತ್ರಗಳನ್ನು ಆರಿಸುತ್ತಿದ್ದಾರೆ. ಸುಖಾ ಸುಮ್ಮನೆ ಹಣ ಬರುತ್ತದೆ, ಸುದ್ದಿಯಲ್ಲಿರುತ್ತೇನೆ ಎಂಬ ನಿಟ್ಟಿನಲ್ಲಿ ಯೋಚಿಸುವುದನ್ನು ಬಿಟ್ಟು, ತನ್ನ ವೃತ್ತಿ ಜೀವನಕ್ಕೆ ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ಯೋಚಿಸಿ ಮುಂದುವರಿಯುವ ಚಿಂತನೆಗೆ ಹಚ್ಚಿಕೊಂಡಿದ್ದಾರೆ.