ಕನಿಷ್ಠ ಡಜನ್ ಹುಡುಗಿಯರನ್ನು ಬಟ್ಟೆ ಬದಲಾಯಿಸಿದಂತೆ ಒಗೆದಿರುವ ಗುಳಿಕೆನ್ನೆ ಹುಡುಗ ದಿಗಂತ್ ತನ್ನ ಬುದ್ಧಿ ತೋರಿಸಿಯೇ ಬಿಟ್ರಾ? ಲೇಟೆಸ್ಟ್ 'ಜಂಭದ ಕೋಳಿ' ಐಂದ್ರಿತಾ ರೇಗೂ ಕೈ ಕೊಟ್ರಾ ಎಂದು ಯೋಚಿಸುತ್ತಿದ್ದೀರಾ?
ಹಾಗೇನಿಲ್ಲ. ಇದು ಕೇವಲ ಡೇಟಿಂಗ್ ವಿಚಾರ. ಛೋಟೆ ನವಾಬ್ ಸೈಫ್ ಆಲಿ ಖಾನ್ ಅನುಮತಿ ಕೊಟ್ರೆ ಝೀರೋ ಫಿಗರ್ ಖ್ಯಾತಿಯ ಕರೀನಾ ಕಪೂರ್ ಜತೆ ಡೇಟಿಂಗ್ ಮಾಡಬೇಕು ಎಂದು ಮಲೆನಾಡು ಶಿವಮೊಗ್ಗದ ಹುಡುಗ 'ಬೆಂಗಳೂರು ಮಿರರ್' ಜತೆ ಹೇಳಿಕೊಂಡಿದ್ದಾರೆ.
ನಿಮ್ಮ ಪ್ರಕಾರ ಪರ್ಫೆಕ್ಟ್ ಗರ್ಲ್‌ಫ್ರೆಂಡ್ ಹೇಗಿರಬೇಕು ಎಂಬ ಪ್ರಶ್ನೆಗೆ, 'ಸೈಫ್ ಆಲಿ ಖಾನ್‌ರ ಹುಡುಗಿ ಕರೀನಾ ಕಪೂರ್. ಆಕೆಯ ಇತ್ತೀಚಿನ ಸಿನಿಮಾಗಳನ್ನು ನೋಡಿದ ನಂತರ ಸಿಕ್ಕಾಪಟ್ಟೆ ಇಷ್ಟವಾಗುತ್ತಿದ್ದಾಳೆ' ಎಂದು ದಿಗಂತ್ ಉತ್ತರಿಸಿದ್ದಾರೆ.
ಇದು ಕರೀನಾ ಕಿವಿಗೆ ಬಿದ್ದರೆ ಏನಂತಾರೋ ಗೊತ್ತಿಲ್ಲ. ಯಾಕೆಂದರೆ ಈ ಹಿಂದೊಮ್ಮೆ ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿಯೇ ಬೇಡ ಎಂದಿದ್ದಾಕೆ ಈ ಕರೀನಾ. ನನಗೆ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ನೋಡಬೇಕೆಂಬ ಆಸೆಯಿದೆ, ಆದರೆ ಖಂಡಿತಾ ಡೇಟಿಂಗ್ ಮಾಡಬೇಕೆಂಬ ಆಸೆಯಿಲ್ಲ ಎಂದು ನೇರಾನೇರ ಚಾನೆಲ್‌ವೊಂದರಲ್ಲಿ ಹೇಳಿದ್ದರು.
ಬಿಡಿ, ನಮ್ಮ ದೂದ್‌ಪೇಡ ದಿಗಂತ್ ಇನ್ನು ಏನೇನು ಹೇಳಿದ್ದಾರೆಂದು ನೋಡೋಣ. ಅವರ ಇಷ್ಟ-ಕಷ್ಟಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ನಾಲ್ಕನೇ ಕ್ಲಾಸಿನ ಮಕ್ಕಳು ಕೊಡುವಂತೆ ಉತ್ತರಿಸಿದ್ದಾರೆ. ನೀವೇ ಓದಿ.
ನಿಮ್ಮ ಹುಚ್ಚು ಅಭಿಮಾನಿ ಯಾರು? * ಮೂಡಬಿದಿರೆ (ಮಂಗಳೂರು ಸಮೀಪ) ಹುಡುಗಿ. ನನ್ನ ಜತೆ ಮಾತನಾಡದೆ ಊಟಾನೇ ಮಾಡಲ್ಲ ಎಂದು ರಚ್ಚೆ ಹಿಡಿದಾಕೆ. ಎರಡು ದಿನ ಊಟವನ್ನೇ ಮಾಡಿರಲಿಲ್ಲ. ಕೊನೆಗೆ ಆಕೆಯ ತಾಯಿ ನನ್ನ ತಾಯಿ ಜತೆ ಸಂಪರ್ಕಕ್ಕೆ ಬಂದ ಮೇಲಷ್ಟೇ ಎಲ್ಲವೂ ಸರಿ ಹೋಗಿದ್ದು.
ಟೈಮ್‌ಪಾಸ್ ಮಾಡೋದು... * ಬ್ಯಾಡ್ಮಿಂಟನ್ ಆಡೋದು, ಸಂಗೀತ ಕೇಳೋದು.
ಅತ್ಯುತ್ತಮ ಉಡುಗೊರೆ... * ತಂದೆ ನನಗೆ ಕೊಟ್ಟ ಮೊದಲ ಬೈಕ್.
ಮುಜುಗರ ತಂದ ಬಟ್ಟೆ... * ಪಾತ್ರವೊಂದಕ್ಕಾಗಿ ಹುಡುಗಿಯಂತೆ ಬಟ್ಟೆ ಧರಿಸಿದ್ದು.
ಗಾಢ ನಿದ್ರೆಯಲ್ಲೂ ನೆನಪಿಗೆ ಬರುವ ಡೈಲಾಗ್... * ಪಂಚರಂಗಿಯ 'ಗಳು' ಡೈಲಾಗ್. ಪಿಯುಸಿಗಳು, ಸಿಇಟಿಗಳು, ಇಂಜಿನಿಯರುಗಳು, ಮೆಡಿಕಲ್ಲುಗಳು..
ನಿಮಗೆ ಅನಿವಾರ್ಯವಾಗಿರುವ ವಸ್ತು... * ಬ್ಲ್ಯಾಕ್‌ಬೆರ್ರಿ. ಇದು ನನ್ನ ಜೀವನವನ್ನು ಸುಲಭ ಮತ್ತು ಸರಳವನ್ನಾಗಿಸಿದೆ.
ಕಣ್ಣು ಮತ್ತು ಹಲ್ಲುಗಳಿಗೆ ಕೆಲಸ ಕೊಡುವ ಪಾತ್ರ... * ತ್ರೀ ಈಡಿಯೆಟ್ಸ್ ಚಿತ್ರದಲ್ಲಿ ಅಮೀರ್ ಖಾನ್ ಮಾಡಿದ್ದ ಪಾತ್ರ.
ನೀವು ಯಂತ್ರವೊಂದನ್ನು ಕಂಡು ಹಿಡಿಯುವುದಾದರೆ? * ಹುಡುಗಿಯರ ಮನಸ್ಸಿನಲ್ಲಿ ಏನಿರುತ್ತದೆ ಎಂಬುದನ್ನು ಓದಲು ಸಾಧ್ಯವಾಗುವಂತಹ ಯಂತ್ರ.