2010ರಲ್ಲಿ ಮುಂದುವರಿದ ರಾಷ್ಟ್ರಗಳಿಂದ ಬೇಡಿಕೆ ಪುನಃ ಗಳಿಸಿಕೊಂಡ ನಂತರ ರಫ್ತು ಉದ್ಯಮವು ಚೇತರಿಕೆ ಕಾಣಲಿದೆ ಎಂದು ಯೋಜನಾ ಆಯೋಗ ತಿಳಿಸಿರುವಂತೆಯೇ, ಸತತ 10ನೇ ವಾರ ಕುಸಿತ ಕಂಡಿರುವ ಭಾರತ ರಫ್ತು ಉದ್ಯಮವು ಜುಲೈಯಲ್ಲಿ ಶೇ.28.4ರ ಹಿನ್ನಡೆ ದಾಖಲಿಸಿದೆ.
ಇಲ್ಲಿ ಸಮಾಧಾನಪಟ್ಟುಕೊಳ್ಳಬೇಕಾದ ಅಂಶವೆಂದರೆ ಆಮದು ಕೂಡ ಶೇ.37.1ರ ಕುಸಿತ ಕಂಡಿರುವುದು. ಕಳೆದ ವರ್ಷದ ಇದೇ ಅವಧಿಯಲ್ಲಿ ಭಾರತವು 12.15 ಬಿಲಿಯನ್ ಡಾಲರುಗಳ ಆಮದು ಹಿನ್ನಡೆ ಕಂಡಿದ್ದರೆ, ಈ ಬಾರಿ ಅದು ಸುಮಾರು ಅರ್ಧದಷ್ಟು ಅಂದರೆ 5.99 ಬಿಲಿಯನ್ ಡಾಲರುಗಳಷ್ಟು ಮಾತ್ರ ಹಿನ್ನಡೆ ಹೊಂದಿದೆ.
ಬೇಡಿಕೆಯ ಮಟ್ಟ ಕುಸಿತದತ್ತಲೇ ಸಾಗಿದ ಕಾರಣ ಜುಲೈ ತಿಂಗಳಲ್ಲಿ ವಾಣಿಜ್ಯ ಸರಕುಗಳ ರಫ್ತು ಪ್ರಮಾಣವು 13.62 ಬಿಲಿಯನ್ ಡಾಲರುಗಳನ್ನಷ್ಟೇ ಹೊಂದಿದೆ.
ಆದರೂ ಮುಂದುವರಿದ ರಾಷ್ಟ್ರಗಳು ಪ್ರಗತಿ ಪಥಕ್ಕೆ ಹಿಂತಿರುಗಿದಾಗ ಆಮದು ಮಾಡಿಕೊಳ್ಳಲು ಆಸಕ್ತಿ ತೋರಿಸಲಿವೆ, 2010ರಲ್ಲಿ ಭಾರತದ ರಫ್ತು ಉದ್ಯಮವು ಚೇತರಿಕೆ ಕಾಣಲಿದೆ ಎಂದು ಇಂದು ಯೋಜನಾ ಆಯೋಗವು ತಿಳಿಸಿದೆ.
'ಕೈಗಾರೀಕೃತ ರಾಷ್ಟ್ರಗಳು 2010ರಲ್ಲಿ ಧನಾತ್ಮಕ ವಲಯಕ್ಕೆ ತಿರುಗಲಿದ್ದು, ಭಾರತದ ರಫ್ತು ಉದ್ಯಮವು ಆ ಸಂದರ್ಭದಲ್ಲಿ ಚೇತರಿಕೆ ಕಾಣಲಿದೆ ಮತ್ತು 2011ರಲ್ಲಿ ಮತ್ತೂ ಹೆಚ್ಚಿನ ಬೆಳವಣಿಗೆಗಳಾಗಲಿವೆ' ಎಂದು ಆಯೋಗ ವಿವರಣೆ ನೀಡಿದೆ.
ಭಾರತದ ಆಮದು ಪ್ರಮಾಣವು ಜುಲೈಯಲ್ಲಿ ಶೇ.37.1ರ ಕುಸಿತ ಕಂಡಿದ್ದು, ಕಳೆದ ವರ್ಷ ಹೊಂದಿದ್ದ 31.18 ಬಿಲಿಯನ್ ಡಾಲರುಗಳಿಂದ 19.62 ಡಾಲರುಗಳಿಗೆ ಹಿನ್ನಡೆ ದಾಖಲಿಸಿದೆ.
ದರ ಪರಿಣಾಮದಿಂದಾಗಿ ಆಮದು ಪ್ರಮಾಣವು ಬಹುತೇಕ ಕುಸಿಯಲು ಕಾರಣವಾಯಿತು. ಕಳೆದ ವರ್ಷಕ್ಕಿಂತ ಈ ಬಾರಿ ಕಚ್ಚಾ ತೈಲ ಬೆಲೆ ಶೇ.50ರಷ್ಟು ಅಗ್ಗವಾಗಿದೆ ಎಂದು ಸಿಆರ್‌ಐಎಸ್‌ಐಎಲ್ ಆರ್ಥಿಕ ತಜ್ಞ ಡಿ.ಕೆ. ಜೋಷಿ ತಿಳಿಸಿದ್ದಾರೆ.