ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » 3ನೇ ವರ್ಷಕ್ಕೆ 2ನೇ ಯುಪಿಎ: ಏನು ಮಾಡಿದೆ? (UPA 2 | 3rd Anniversary | Congress | Manmohan Singh | Sonia Gandhi)
PTI
ಹಗರಣಗಳ ಸುಳಿಯೊಳಗೆ ಸಿಲುಕಿಕೊಂಡು, ವಿತ್ತೀಯ ಸುಧಾರಣೆ ವಿಭಾಗದಲ್ಲಿಯೂ ಅಷ್ಟೇನೂ ದೊಡ್ಡ ಸಾಧನೆ ಮಾಡಲು ಪುರುಸೊತ್ತೇ ಇಲ್ಲದೆ ಇಡೀ ವರ್ಷ ಕಳೆದ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ 2ನೇ ಯುಪಿಎ ಸರಕಾರವು ಬಹುಶಃ ಎಲ್ಲ ಗೊಂದಲಗಳಿಂದ ಹೊರಬರುವ ನಿರೀಕ್ಷೆಯೊಂದಿಗೆ ಭಾನುವಾರ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ.

2004ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪ್ರಧಾನಿ ಪದವಿ ನಿರಾಕರಿಸಿದ ಬಳಿಕ ಈ ಹುದ್ದೆಗೇರಿದ 79ರ ಹರೆಯದ ಮನಮೋಹನ್ ಸಿಂಗ್‌ಗೆ, ಕಳೆದ ಏಳೆಂಟು ತಿಂಗಳುಗಳಿಂದ ಒಂದಲ್ಲ ಒಂದು ಸಮಸ್ಯೆಗಳ ಸುಳಿಗೆ ಸಿಲುಕುವುದೇ ಕೆಲಸವಾಗಿಬಿಟ್ಟಿತ್ತು ಎಂಬುದನ್ನು ನಾವು ಗಮನಿಸಬೇಕು.

ಒಂದಿಷ್ಟು ಹಿನ್ನೋಟ ಹರಿಸಿದರೆ, ಆಡಳಿತಾರೂಢ ಮೈತ್ರಿಕೂಟದ ನೇತೃತ್ವ ವಹಿಸಿದ್ದ ಪಕ್ಷಕ್ಕೆ ಲಭ್ಯವಾದ ಏಕೈಕ ತೃಪ್ತಿಯ ಸಂಗತಿಯೆಂದರೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಗಳು. ಅಸ್ಸಾಂ ಸರಕಾರವನ್ನು ಭರ್ಜರಿಯಾಗಿಯೇ ಉಳಿಸಿಕೊಂಡಿದ್ದರೆ, ಕೇರಳದಲ್ಲಿ ಸರಳ ಬಹುಮತ ಪಡೆದು ಅಧಿಕಾರಕ್ಕೇರಿತ್ತು. ಪಶ್ಚಿಮ ಬಂಗಾಳದಲ್ಲಿಯೂ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಬೆನ್ನೇರಿ 34 ವರ್ಷಗಳ ಎಡರಂಗ ಆಳ್ವಿಕೆ ಕೊನೆಗಾಣಿಸುವ ದಾರಿಯಲ್ಲಿ, ತನ್ನ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತ್ತು.

2ಜಿ ಹಗರಣ, ಕಾಮನ್ವೆಲ್ತ್ ಹಗರಣ, ಆದರ್ಶ ಹೌಸಿಂಗ್ ಸೊಸೈಟಿ ವಿವಾದ ಮತ್ತು ಸಿವಿಸಿ ಪಿ.ಜೆ.ಥೋಮಸ್ ವಿವಾದ, ವಿದೇಶದಲ್ಲಿ ಕಪ್ಪು ಹಣ, ಪಾಕ್ ಜೊತೆಗೆ ಸಂಬಂಧ, ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಅಚಾತುರ್ಯ.... ಇವೆಲ್ಲವೂ ಪ್ರಧಾನ ಮಂತ್ರಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ತಂದೊಡ್ಡಿದ ಕೆಲವು ಪ್ರಮುಖ ಸಂಗತಿಗಳು.

2ಜಿ ತರಂಗಾಂತರ ಹಂಚಿಕೆ ಹಗರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ಕೂಡ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡು, ದೊಡ್ಡ ಹಗರಣ ನಡೆದಿದೆ ಎಂದು ಹಿಂದೆಯೇ ಹಲವು ಸೂಚನೆಗಳು ಸಿಕ್ಕಾಗಲೂ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಮೇಲೆ ಕ್ರಮವೇಕೆ ತೆಗೆದುಕೊಂಡಿಲ್ಲ ಎಂದು ಕೇಳಿತ್ತು.

ಇದೇ ಸ್ಥಿತಿ ಯುಪಿಎ ಅಧ್ಯಕ್ಷೆಯೂ ಆಗಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರದು. ಅವರು ಕೂಡ ಅಗ್ನಿ ಶಮನ ಕಾರ್ಯಾಚರಣೆಗಾಗಿ ಸಾಕಷ್ಟು ಪರದಾಡಬೇಕಾಯಿತು.

ಬೆಲೆ ಏರಿಕೆ ಸಂಗತಿಯಂತೂ ವಿತ್ತ ತಜ್ಞನೆಂಬ ಖ್ಯಾತಿಯ ಪ್ರಧಾನಿಗೆ ಅತಿ ದೊಡ್ಡ ಸವಾಲಾಯಿತು. ಏರುತ್ತಿರುವ ಬೆಲೆಗಳನ್ನು ತಡೆಯಲು ಏನು ಮಾಡಬೇಕೆಂಬುದೇ ತಿಳಿಯದೆ ಕಂಗಾಲಾಯಿತು ಸರಕಾರ. ಬೆಲೆ ಇಳಿಸಲು ನಮಗೇನೂ ಮ್ಯಾಜಿಕ್ ಗೊತ್ತಿಲ್ಲ ಎಂಬಂತಹಾ ಹೇಳಿಕೆಗಳೂ ಮಂತ್ರಿಗಳಿಂದ ಬಂದವು. ಅಸಹಾಯಕತೆಯ ನಡುವೆಯೇ ಅಭೂತಪೂರ್ವವಾಗಿ ಏರಿಕೆ ಕಂಡವು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಗಳು. ಜನ ಸಾಮಾನ್ಯರು ತತ್ತರಿಸಿದರು.

ರಾಜಾ ತಿಹಾರ್ ಜೈಲು ಸೇರಿದರು. ದೊಡ್ಡ ದೊಡ್ಡ ಕುಳಗಳಾದ, ಕಾಮನ್ವೆಲ್ತ್ ಹಗರಣ ಆರೋಪದಲ್ಲಿ ಕಾಂಗ್ರೆಸ್ ಸಂಸದ ಸುರೇಶ್ ಕಲ್ಮಾಡಿ, 2ಜಿ ಹಗರಣದಲ್ಲಿ ಪಾಲು ಹೊಂದಿದ್ದ ಆರೋಪದಲ್ಲಿ ಡಿಎಂಕೆ ಸಂಸದೆ ಕನಿಮೊಳಿ ಕೂಡ ಜೈಲು ಸೇರಿದ್ದು ಯುಪಿಎ ಸರಕಾರಕ್ಕೆ ಸಂಬಂಧಿಸಿ ಒಳ್ಳೆಯ ಬೆಳವಣಿಗೆಗಳಲ್ಲ. ನೀರಾ ರಾಡಿಯಾ ಟೇಪುಗಳಂತೂ ಸರಕಾರ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಬಟಾಬಯಲು ಮಾಡುವಲ್ಲಿ ತನ್ನದೇ ಕಥೆಗಳನ್ನು ಹೊಂದಿದ್ದವು.

ಇವೆಲ್ಲವುಗಳಿಂದ ಅನುಭವಿಸಿದ ಮುಜುಗರದಿಂದ ಚೇತರಿಸಿಕೊಳ್ಳಲು ಬಿಡದೇ ಇರುವ ಮತ್ತೊಂದು ಪ್ರಕರಣವೆಂದರೆ, ಕಳಂಕಿತ ಅಧಿಕಾರಿ ಪಿ.ಜೆ.ಥಾಮಸ್ ಅವರನ್ನು ಸಿವಿಸಿ ಆಗಿ ನೇಮಿಸಿಕೊಂಡಿರುವುದು. ಇದರ ಮೇಲೆ ಕಲಶಪ್ರಾಯವಾಗಿ ಪಾಕಿಸ್ತಾನಕ್ಕೆ ಸಲ್ಲಿಸಿದ 'ಮೋಸ್ಟ್ ವಾಂಟೆಡ್' ಪಟ್ಟಿಯಲ್ಲಿ ಕೆಲವರು ಭಾರತದಲ್ಲೇ, ಅದು ಕೂಡ ಜೈಲುಗಳಲ್ಲೇ ಪತ್ತೆಯಾದವರು, ಮತ್ತೆ ಕೆಲವರು ಈಗಾಗಲೇ ಸತ್ತವರೂ ಸೇರಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೇ ಮುಜುಗರ ತಂದ ಸಂಗತಿ.

ಈ ಬಾರಿಯೇನು ಯುಪಿಎ-1ರಂತೆ ಎಡಪಕ್ಷಗಳ ಹಂಗಿಲ್ಲ. ಹೀಗಿರುವಾಗ ವಿತ್ತೀಯ ವಿಭಾಗದಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಸುಲಭವಾಗಿ ಮಾಡಬಹುದು ಸರಕಾರ ಎಂಬ ನಿರೀಕ್ಷೆ ಜನತೆಯಲ್ಲಿತ್ತು. ಅಂಥದ್ದೇನೂ ನಡೆದಿರುವಂತೆ ಕಾಣಿಸುತ್ತಿಲ್ಲ. ಸರಕಾರವು ಇಷ್ಟೆಲ್ಲಾ ಸಮಸ್ಯೆಗಳ ಸರಮಾಲೆಯಲ್ಲಿರುವಾಗ, ಬಲಪಂಥೀಯ ಮತ್ತು ಎಡಪಂಥೀಯ ಪ್ರತಿಪಕ್ಷಗಳಂತೂ ಯಾವುದರ ವಿರುದ್ಧ ಪ್ರತಿಭಟನೆ ಮಾಡುವುದು ಎಂದು ಕಂಗಾಲಾದವು.

ದೇಶ ಕಂಡ ಅತಿ ದೊಡ್ಡ ಹಗರಣ ಎಂದು ಹೇಳಲಾಗುವ, 1.76 ಲಕ್ಷ ಕೋಟಿ ರೂ. ಮೊತ್ತದ 2ಜಿ ಹಗರಣಕ್ಕೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಆಗ್ರಹದಿಂದಾಗಿ ಸಂಸತ್ತಿನ ಚಳಿಗಾಲದ ಅಧಿವೇಶನ ಸಂಪೂರ್ಣವಾಗಿ ನೆಲಕಚ್ಚಿತು. ಪ್ರತಿಪಕ್ಷಗಳು ಜಗ್ಗಲಿಲ್ಲ, ಸರಕಾರ ಬಗ್ಗಲಿಲ್ಲ.

ಈ ವರ್ಷವಿಡೀ ಭ್ರಷ್ಟಾಚಾರವೇ ತುಂಬಿ ತುಳುಕಾಡುತ್ತಿದ್ದುದರ ಬೆನ್ನಲ್ಲೇ, ಗಾಂಧಿವಾದಿ ಅಣ್ಣಾ ಹಜಾರೆ ಅವರು ಜನಪ್ರತಿನಿಧಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಲೋಕಪಾಲ ಮಸೂದೆಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿ ದೇಶಾದ್ಯಂತ ಸಂಚಲನ ಮೂಡಿಸಿದರು; ಭ್ರಷ್ಟಾಚಾರದ ವಿರುದ್ಧ ಜಾಗೃತಿಯ ಕಿಡಿ ಹಚ್ಚಿದರು. ನಾಲ್ಕು ದಿನಗಳ ಪ್ರತಿಭಟನೆಗೆ ಕೊನೆಗೂ ಸರಕಾರ ಮಣಿದು, ಜನರನ್ನೂ ಸೇರಿಸಿ ಕರಡು ಸಮಿತಿ ರಚಿಸಿ, ಮಸೂದೆಯನ್ನು ಸಂಸತ್ ಅಧಿವೇಶನದಲ್ಲೇ ಪಾಸ್ ಮಾಡಿಸುತ್ತೇವೆ ಎಂದು ಭರವಸೆ ನೀಡಿತು.

ಮಂಗಳೂರಿನಲ್ಲಿ ವಿಮಾನ ಪತನಗೊಂಡು 158 ಮಂದಿ ಸಾವನ್ನಪ್ಪಿದ ಕಾರಣದಿಂದಾಗಿ ಯುಪಿಎ-2ರ ಮೊದಲ ವಾರ್ಷಿಕೋತ್ಸವ ಆಚರಣೆಯಾಗಿರಲಿಲ್ಲ.

ಯುಪಿಎ-1ರಲ್ಲಿ ಮಾಹಿತಿ ಹಕ್ಕು ಕಾಯಿದೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂತಹಾ ಒಂದಿಷ್ಟು ಒಳ್ಳೆಯ ಕೆಲಸಗಳಾಗಿದ್ದವು. ಆದರೆ ಯುಪಿಎ-2ನಲ್ಲಿ ಹೇಳಿಕೊಳ್ಳುವಂತಹಾ ಕ್ರಮಗಳೇನೂ ಇಲ್ಲ. ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳೂ ಇಲ್ಲ. ಗೊತ್ತು ಗುರಿಯಿಲ್ಲದಂತೆಯೇ ಸಾಗುತ್ತಿದೆ ಎಂಬುದು ಪ್ರತಿಪಕ್ಷಗಳ ಆರೋಪ.

ಎಷ್ಟರ ಮಟ್ಟಿಗೆ ಎಂದರೆ, ಈ ಸರಕಾರಕ್ಕೆ ಪ್ರತೀ ಹಂತದಲ್ಲಿಯೂ ಸುಪ್ರೀಂ ಕೋರ್ಟಿನ ನಿರ್ದೇಶನ, ತಪರಾಕಿಗಳು (2ಜಿ, ಕಾಮನ್ವೆಲ್ತ್, ಸಿವಿಸಿ ನೇಮಕ, ತೆರಿಗೆ ವಂಚಕ ಹಸನ್ ಅಲಿ, ವಿದೇಶದಲ್ಲಿ ಕಪ್ಪು ಹಣ....) ಸಿಗುತ್ತಲೇ ಇದ್ದವು. ನಂತರವಷ್ಟೇ ಅದು ಎಚ್ಚೆತ್ತುಕೊಂಡು ಕೆಲಸ ಮಾಡಲು ತೊಡಗುತ್ತಿತ್ತು.

ಪ್ರಧಾನಿಯೇ 'ಮಾಧ್ಯಮಗಳು ಬಿಂಬಿಸುವಷ್ಟು ದೊಡ್ಡ ತಪ್ಪಿತಸ್ಥ ನಾನೇನೂ ಅಲ್ಲ' ಎಂಬುದಾಗಿಯೂ, ಸಮ್ಮಿಶ್ರ ರಾಜಕೀಯ ಧರ್ಮದ ಬದ್ಧತೆಯಲ್ಲಿದ್ದೇನೆ ಅಂತಲೂ ಬಹಿರಂಗವಾಗಿಯೇ ಪ್ರಧಾನಿ ಅಸಹಾಯಕತೆ ಸಾರುವುದರೊಂದಿಗೆ, ಮನಮೋಹನ್ ಸಿಂಗ್ ಬಗೆಗಿದ್ದ ಒಳ್ಳೆಯ ಅಭಿಪ್ರಾಯಗಳೂ ನಿಧಾನವಾಗಿ ಮೂಲೆಗೆ ಸರಿಯತೊಡಗಿದ್ದವು. ಒಂದು ಕಡೆಯಿಂದ ಡಿಎಂಕೆ ಜತೆಗಿನ ಬಾಂಧವ್ಯ ಹಳಸಿ ಹೋಗುತ್ತಿದ್ದರೆ, ಮತ್ತೊಂದೆಡೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಜತೆಗೆ ಕೂಡ ಸಂಬಂಧ ಹಾಳಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಹಲವು ರಾಜ್ಯಗಳಿಗೆ ಮುಂದಿನ ವರ್ಷ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ವಿಶೇಷವಾಗಿ ಉತ್ತರ ಪ್ರದೇಶ. ಮುಂದಿನ ರಾಷ್ಟ್ರಪತಿ, ಉಪರಾಷ್ಟ್ರಪತಿ ಯಾರು ಎಂಬುದನ್ನು ಆಯ್ಕೆ ಮಾಡುವ ಹೊಣೆಗಾರಿಕೆಯೂ ಇದೆ. ಭಾರತವೊಂದು ಪ್ರವರ್ಧಮಾನ ಶಕ್ತಿ ಅಂತ ಜಾಗತಿಕ ನಾಯಕರು ಹೇಳುತ್ತಿರುವುದನ್ನು ಉಳಿಸಿಕೊಳ್ಳುವ ಅತಿದೊಡ್ಡ ಜವಾಬ್ದಾರಿಯೂ ಇದೆ. ಜನರ ಏಕೈಕ ಆಶೋತ್ತರವಾಗಿರುವ ಬೆಲೆಗಳನ್ನು ಇಳಿಸುವ ಕಾಯಕವೂ ಮುಂದಿದೆ. ಸರಕಾರ ತನ್ನ ಚಾಣಾಕ್ಷತೆಯನ್ನು ಮೆರೆದು, ಉತ್ತಮ ಆಡಳಿತ ನಡೆಸಿದೆ ಎಂಬ ಹೆಸರಿಗೆ ಪಾತ್ರವಾಗಬಹುದೇ ಎಂಬುದು ಮತದಾರರ ನಿರೀಕ್ಷೆ.
ಇವನ್ನೂ ಓದಿ