ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣದಲ್ಲಿ ಸುಮ್ಮನಿದ್ದ ಪ್ರಧಾನಿ ಅಪರಾಧಿ: ಬಿಜೆಪಿ (Manmohan Singh | 2G scam | BJP | Congress)
Bookmark and Share Feedback Print
 
2ಜಿ ತರಂಗಾಂತರ ಹಗರಣ ಕುರಿತು ನೇರವಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಮೇಲೆ ವಾಗ್ದಾಳಿ ನಡೆಸಿರುವ ಬಿಜೆಪಿ, ಹಗರಣವನ್ನು ತಡೆಯದ ಮತ್ತು ಈ ಕುರಿತು ದೃಢ ನಿಲುವು ತಳೆಯದ ವಿಚಾರದಲ್ಲಿ ಪ್ರಧಾನಿ ಅಪರಾಧಿ ಎಂದಿದೆ.

2ಜಿ ಹಗರಣವನ್ನು ತಡೆಯಲು ಪ್ರಧಾನಿಯವರಿಗೆ ಸಾಧ್ಯವಿತ್ತು. ಕನಿಷ್ಠ ಅದರಿಂದಾಗುವ ಹಾನಿಯನ್ನಾದರೂ ತಡೆಯಬಹುದಿತ್ತು. ಆದರೆ ಅವರು ಯಾವುದೇ ದೃಢ ನಿಲುವು ತೆಗೆದುಕೊಳ್ಳದೆ ತಪ್ಪಿತಸ್ಥರಾಗಿದ್ದಾರೆ. ಅವರು ಕ್ರಮ ಕೈಗೊಳ್ಳದ ಅಪರಾಧಿ ಎಂದು ನಾವು ಆರೋಪ ಮಾಡುತ್ತಿದ್ದೇವೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಸಂಸತ್ತಿನ ಹೊರಗೆ ನುಡಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಜೆಪಿ ಮೇಲೆ ಮಾಡಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಹಾರ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ತೋರಿಸಿರುವ ಹತಾಶೆಯನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ; ಅವರು ನಿಜಕ್ಕೂ ಭ್ರಷ್ಟಾಚಾರವನ್ನು ತೊಲಗಿಸಲು ಬಯಸುತ್ತಿರುವುದು ನಿಜವಾಗಿದ್ದರೆ, ಮೂರು ಪ್ರಮುಖ ಹಗರಣಗಳ ಕುರಿತು ಜೆಪಿಸಿ ತನಿಖೆಗೆ ಯಾಕೆ ಒಪ್ಪುತ್ತಿಲ್ಲ ಎಂದು ಪ್ರಶ್ನಿಸಿದರು.

ಭೂ ಹಗರಣಗಳ ಆರೋಪ ಹೊತ್ತಿರುವ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮುಂದುವರಿಸಲು ನಿರ್ಧರಿಸಿದ್ದ ಬಿಜೆಪಿ ವಿರುದ್ಧ ಸೋನಿಯಾ ಹರಿಹಾಯ್ದಿದ್ದರು.

ಭ್ರಷ್ಟಾಚಾರ ಆರೋಪಗಳನ್ನು ಎದುರಿಸಿದ ಹಲವು ನಾಯಕರನ್ನು ಕಾಂಗ್ರೆಸ್ ವಜಾಗೊಳಿಸಿದೆ ಎಂದು ಸೋನಿಯಾ ಹೇಳಿದ್ದಾರೆ. ನೀವು ಇದೇ ರೀತಿ ಮಾಡುತ್ತಿದ್ದರೆ ನಿಮ್ಮ ಪಕ್ಷದಲ್ಲಿ ಯಾರೊಬ್ಬರೂ ಪ್ರಾಮಾಣಿಕರಾಗಿ ಉಳಿಯಲಾರರು ಎಂದು ಅವರಿಗೆ ಹೇಳಲು ಬಯಸುತ್ತಿದ್ದೇನೆ ಎಂದರು.

ಬಿಜೆಪಿಯದ್ದು ವ್ಯಾಪಾರಿ ಮನೋಭಾವ: ತಿವಾರಿ
ಬಿಜೆಪಿಗೆ ಒಂಚೂರಾದರೂ ನೈತಿಕತೆ ಎನ್ನುವುದು ಇದೆಯೇ? ಅವರಲ್ಲಿರುವುದು ಕೇವಲ ವ್ಯಾಪಾರಿ ಮನೋಭಾವ. ಹತ್ತು ವರ್ಷಗಳ ಹಿಂದೆ ಅವರು ಕಾರ್ಗಿಲ್ ಹೆಸರಿನಲ್ಲಿ ದೂರವಾಣಿ ಸಂಸ್ಥೆಗಳಿಗೆ 60,000 ಕೋಟಿ ರೂಪಾಯಿಗಳ ರಿಯಾಯಿತಿಗಳನ್ನು ನೀಡುವ ಮೂಲಕ ಬೊಕ್ಕಸಕ್ಕೆ ಭಾರೀ ನಷ್ಟವನ್ನುಂಟು ಮಾಡಿದವರು ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಆರೋಪಿಸಿದ್ದಾರೆ.

ಬಿಹಾರ ಫಲಿತಾಂಶದ ನಂತರ ಅವರು ಮಾಡಿದ ಮೊದಲ ಕೆಲಸವೆಂದರೆ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರ ಭ್ರಷ್ಟಾಚಾರವನ್ನು ಅಪರಾಧ ಮುಕ್ತಗೊಳಿಸಿದ್ದು. ಅದು ಚುನಾವಣಾ ಕಣವಾಗಿರಬಹುದು ಅಥವಾ ಯುದ್ಧ ಭೂಮಿಯಾಗಿರಬಹುದು, ಬಿಜೆಪಿಯ ಪ್ರಮುಖ ಗುರಿ ಇರುವುದು ಭ್ರಷ್ಟಾಚಾರವನ್ನು ಅಧಿಕೃತಗೊಳಿಸುವುದು ಎಂದರು.

ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಕಾಂಗ್ರೆಸ್ ಮಾಡುತ್ತಿರುವ ಆರೋಪ ನಿರಾಧಾರ. 10 ವರ್ಷಗಳ ಹಿಂದೆ ನಡೆದಿರುವುದನ್ನು ಜನ ಮರೆತಿದ್ದಾರೆ ಎಂದು ಕಾಂಗ್ರೆಸ್ ಭಾವಿಸಿದಂತಿದೆ. ಬಿಜೆಪಿ ಸರಕಾರವು ಅಂದು ನೂತನ ದೂರವಾಣಿ ನೀತಿಯನ್ನು ಜಾರಿಗೊಳಿಸಿದ್ದು ಸಂಸತ್ತಿನಲ್ಲಿ ಚರ್ಚೆ ನಡೆಸಿದ ನಂತರ ಎನ್ನುವುದನ್ನು ಅವರು ಗಮನಕ್ಕೆ ತೆಗೆದುಕೊಳ್ಳಲಿ ಎಂದು ಜಾವಡೇಕರ್ ತಿರುಗೇಟು ನೀಡಿದ್ದಾರೆ.

ಆದರೆ 2ಜಿ ಹಗರಣ ಅಥವಾ ಅದಕ್ಕೆ ಸಂಬಂಧಪಟ್ಟ ವಿಚಾರಗಳು ಸಂಸತ್ತಿನಲ್ಲಿ ಅಥವಾ ಕ್ಯಾಬಿನೆಟ್‌ಗೆ ಬಂದಿಲ್ಲ. ಈ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಇಲಾಖೆಗಳು. ಅದೇ ಕಾರಣದಿಂದ ಹಗರಣ ನಡೆದಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ