ಹಗರಣಗಳ ವಿರುದ್ಧ ಸಂಸತ್ತಿನಲ್ಲಿ ಹೋರಾಡಿ ಉತ್ತೇಜನ ಪಡೆದುಕೊಂಡಿರುವ ಎನ್‌ಡಿಎ, ತನ್ನ ರಾಷ್ಟ್ರವ್ಯಾಪಿ ಹೋರಾಟಕ್ಕೆ ಭರ್ಜರಿ ಚಾಲನೆ ನೀಡಿದೆ. 2ಜಿ ಹಗರಣವನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲೇಬೇಕು ಎಂದು ಒತ್ತಾಯಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ, ಅದು ಸಾಧ್ಯವಾಗದೇ ಇದ್ದಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರಾಜೀನಾಮೆ ಕೊಡಬೇಕು ಎಂದು ಹೊಸ ಬೇಡಿಕೆ ಮುಂದಿಟ್ಟಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ನಡೆದಿರುವ 1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒಪ್ಪಿಸಬೇಕು ಎಂಬ ಬೇಡಿಕೆಯಿಂದ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ. ಜೆಪಿಸಿ ತನಿಖೆಗೆ ಪ್ರಧಾನಿಯವರು ಸಿದ್ಧರಿಲ್ಲದೇ ಹೋದಲ್ಲಿ, ಅವರು ನಿರ್ಗಮಿಸಬೇಕು ಎಂದು ಒತ್ತಾಯಿಸಲಾಗಿದೆ.
ಇಂದು ದೆಹಲಿಯಲ್ಲಿ ಆರಂಭವಾಗಿರುವ ಸರಕಾರದ ಭ್ರಷ್ಟಾಚಾರದ ವಿರುದ್ಧದ ಎನ್‌ಡಿಎ ರ‌್ಯಾಲಿ, 2011ರ ಫೆಬ್ರವರಿ ಕೊನೆಯ ವಾರದಲ್ಲಿ ಆರಂಭವಾಗಲಿರುವ ಬಜೆಟ್ ಅಧಿವೇಶನಕ್ಕೂ ಮೊದಲು ಎರಡು ತಿಂಗಳುಗಳ ಕಾಲ ದೇಶದ 12 ಪ್ರಮುಖ ನಗರಗಳಲ್ಲಿ ನಡೆಯಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಬೃಹತ್ ರ‌್ಯಾಲಿಯಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆಯ ವಿಪಕ್ಷ ನಾಯಕ ಅರುಣ್ ಜೇಟ್ಲಿ, ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ, ಎನ್‌ಡಿಎ ಸಂಚಾಲಕ ಶರದ್ ಪವಾರ್ ಮುಂತಾದವರು, ಪ್ರಧಾನಿ ಸಿಂಗ್ ಮತ್ತು ಕಾಂಗ್ರೆಸ್ ಮೇಲೆ ನೇರವಾಗಿ ದಾಳಿ ನಡೆಸಿದರು.
ತನ್ನ ಸರಕಾರದಲ್ಲಿ ನಡೆದಿರುವ ಹಗರಣಗಳು, ಅವ್ಯವಹಾರಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಹೊಸ ವಿವಾದಗಳನ್ನು ಎಬ್ಬಿಸುತ್ತಿದೆ. ಆ ಮೂಲಕ ಜನತೆಯ ಹಾದಿ ತಪ್ಪಿಸುತ್ತಿದೆ ಎಂದು ಎನ್‌ಡಿಎ ನಾಯಕರು ಆರೋಪಿಸಿದರು.
ಪ್ರಧಾನಿ ಮತ್ತು ಕಾಂಗ್ರೆಸ್, ಜೆಪಿಸಿ ತನಿಖೆ ಬೇಡ ಎಂದು ಹೇಳುತ್ತಿದ್ದಾರೆ. ಅದಕ್ಕೆ ಒಪ್ಪುತ್ತಿಲ್ಲ. ಆದರೆ ನಮ್ಮದು ಒಂದೇ ಪ್ರಶ್ನೆ. ಜೆಪಿಸಿ ತನಿಖೆ ಯಾಕೆ ಬೇಡ ಎಂದು ಒಂದೇ ಒಂದು ಕಾರಣ ನೀಡಿ ಎಂದು ಗಡ್ಕರಿ ಸರಕಾರವನ್ನು ಪ್ರಶ್ನಿಸಿದರು.
ದೇಶ ಕಂಡು-ಕೇಳರಿಯದ 2ಜಿ ಹಗರಣದಲ್ಲಿ ನ್ಯಾಯ ಒದಗಿಸಲು ಜೆಪಿಸಿಯಿಂದ ಮಾತ್ರ ಸಾಧ್ಯ ಎಂದ ಗಡ್ಕರಿ, ಇದಕ್ಕೆ ಒಪ್ಪಿಗೆ ನೀಡಲು ಪ್ರಧಾನಿಗೆ ಇಷ್ಟವಿಲ್ಲದೇ ಇದ್ದಲ್ಲಿ ರಾಜೀನಾಮೆ ಕೊಡಿ ಎಂದರು.
ಕಾಮನ್‌ವೆಲ್ತ್ ಗೇಮ್ಸ್, 2ಜಿ ಸೇರಿದಂತೆ ಹಲವು ಹಗರಣಗಳಲ್ಲಿ ಯುಪಿಎ ಸರಕಾರ ಸಿಲುಕಿದೆ. ಇದನ್ನು ಸೂಕ್ತವಾಗಿ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸುವ ಬದಲು ಅವರನ್ನು ರಕ್ಷಿಸುವ ಕಾರ್ಯದಲ್ಲಿ ಸರಕಾರ ಮತ್ತು ಕಾಂಗ್ರೆಸ್ ನಿರತವಾಗಿದೆ. ಜೆಪಿಸಿ ತನಿಖೆಗೆ ಬಹುತೇಕ ಎಲ್ಲಾ ಪ್ರತಿಪಕ್ಷಗಳು ಬೇಡಿಕೆ ಮುಂದಿಡುತ್ತಿರುವ ಹೊರತಾಗಿಯೂ ಸರಕಾರ ಯಾಕೆ ಒಪ್ಪುತ್ತಿಲ್ಲ? ಸಿಕ್ಕಿ ಬೀಳುತ್ತೀರೆಂಬ ಹೆದರಿಕೆಯೇ ಎಂದು ಪ್ರಶ್ನೆ ಹಾಕಿದರು.
ಶಂಕೆ ಮುಕ್ತರಾಗಿ: ಜೇಟ್ಲಿ ಸರಕಾರವು ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಪ್ರಧಾನಿ ಜೆಪಿಸಿ ಎದುರಿಸಲೇಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ ಜೇಟ್ಲಿ, ಕಳಂಕಿತ ಪಿ.ಜೆ. ಥಾಮಸ್ ಅವರನ್ನು ಕೇಂದ್ರ ಜಾಗೃತ ಆಯುಕ್ತರನ್ನಾಗಿ ನೇಮಕ ಮಾಡಿರುವ ಕ್ರಮವನ್ನೂ ತೀವ್ರವಾಗಿ ಖಂಡಿಸಿದರು.
ಅಲ್ಲದೆ, ತಾವು ಸಂಸತ್ ಕಲಾಪಕ್ಕೆ ಅಡ್ಡಿಪಡಿಸದೇ ಇರುತ್ತಿದ್ದರೆ ಇಂದು ಕೂಡ ದೂರಸಂಪರ್ಕ ಖಾತೆ ಸಚಿವರಾಗಿ ಎ. ರಾಜಾ ಮುಂದುವರಿಯುತ್ತಿದ್ದರು ಎಂದು ಬೆಟ್ಟು ಮಾಡಿ ತೋರಿಸಿದರು.
ನೀವೇ ಹೇಳುವಂತೆ ಪ್ರಧಾನ ಮಂತ್ರಿ ಸ್ಥಾನವು ಸಂಶಯ ಮುಕ್ತವಾಗಿರಬೇಕು ಎನ್ನುವುದು ನಿಜವಾಗಿದ್ದರೆ, ಪ್ರಾಮಾಣಿಕವಾಗಿ ಜೆಪಿಸಿ ತನಿಖೆಗೆ ಒಪ್ಪಿಗೆ ಸೂಚಿಸಿ. ಒಂದು ವೇಳೆ ಪ್ರತಿಪಕ್ಷಗಳ ಕಳವಳಕ್ಕೆ ನಿಮ್ಮಲ್ಲಿ ಯಾವುದೇ ಉತ್ತರ ಇಲ್ಲದೇ ಇದ್ದರೆ, ನೈತಿಕ ನೆಲೆಯಲ್ಲಿ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದರು.
ಏನು ಮುಚ್ಚಿಡುತ್ತಿದ್ದೀರಿ?: ಸುಷ್ಮಾ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಸಿಂಗ್ ವಿರುದ್ಧ ವಾಕ್ ಪ್ರಹಾರ ನಡೆಸಿದ ಸುಷ್ಮಾ ಸ್ವರಾಜ್, ಜೆಪಿಸಿ ತನಿಖೆಗೆ ಸರಕಾರ ಹೆದರುತ್ತಿದೆ. ಯಾಕೆ ಜೆಪಿಸಿ ತನಿಖೆಗೆ ಒಪ್ಪುತ್ತಿಲ್ಲ ಎಂದು ಪ್ರಧಾನಿ ಮತ್ತು ಸೋನಿಯಾ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಿಯವರು ಜೆಪಿಸಿಗೆ ನೋ ಎಂದರು, ಸೋನಿಯಾ ಕೂಡ ಜೆಪಿಸಿಗೆ ಒಲ್ಲೆ ಎಂದರು. ಜೆಪಿಸಿ ಯಾಕೆ ಬೇಡ ಸೋನಿಯಾಜೀ, ನಿಮಗ್ಯಾಕೆ ಬೇಡ ಜೆಪಿಸಿ ಮನಮೋಹನ್ ಸಿಂಗರೇ? ನೀವು ಪಿಎಸಿ ಸಮಿತಿಯ ಎದುರು ಹಾಜರಾಗಲು ಸಿದ್ಧರಿರುವಾಗ, ಜೆಪಿಸಿ ಯಾಕೆ ಬೇಡ ಎಂದು ಹೇಳುತ್ತಿದ್ದೀರಿ? ಇದರ ಹಿಂದಿನ ಮರ್ಮವೇನು ಎಂದು ಸುಷ್ಮಾ ಅಚ್ಚರಿಯಿಂದ ಪ್ರಶ್ನಿಸಿದರು.
ಮಾನ್ಯ ಪ್ರಧಾನ ಮಂತ್ರಿಯವರೇ, ನೀವು ಜೆಪಿಸಿ ತನಿಖೆಗೆ ಸಿದ್ಧರಿಲ್ಲ ಎಂದು ಹೇಳುತ್ತೀರಾದರೆ, ಅದರ ಅರ್ಥ ನೀವು ಸಾಕಷ್ಟು ಮುಚ್ಚಿಡಲು ಬಯಸುತ್ತಿದ್ದೀರಿ ಎಂದು. ಇದನ್ನು ಸ್ಪಷ್ಟಪಡಿಸಿ. ಯಾಕೆ ಜೆಪಿಸಿ ತನಿಖೆ ಬೇಡವೆಂದು ಉತ್ತರಿಸಿ ಎಂದರು.
ಸೋನಿಯಾಗೆ ನೈತಿಕತೆಯೇ ಇಲ್ಲ: ಅಡ್ವಾಣಿ ಭ್ರಷ್ಟಾಚಾರದ ಕುರಿತು ಮಾತನಾಡುವ ಯಾವುದೇ ನೈತಿಕತೆ ಸೋನಿಯಾ ಗಾಂಧಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ ಅಡ್ವಾಣಿ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮೌನವನ್ನು ಪ್ರಶ್ನಿಸಿದರು.
ಸ್ವಾತಂತ್ರ್ಯೋತ್ತರ ಭಾರತದ ಬೃಹತ್ ಹಗರಣವನ್ನು ಜೆಪಿಸಿಗೆ ಒಪ್ಪಿಸಬೇಕೆಂದು ಪ್ರತಿಪಕ್ಷಗಳು ಬೇಡಿಕೆ ಮುಂದಿಡುವಾಗ, ಅದಕ್ಕೆ ಯಾಕೆ ಸರಕಾರ ನಿರಾಕರಿಸುತ್ತಿದೆ. ಇದೊಂದು ಗಂಭೀರ ವಿಚಾರ. ಈ ಹಿಂದೆಯೂ ನಾಲ್ಕು ಬಾರಿ ಜೆಪಿಸಿ ತನಿಖೆಗಳು ನಡೆದಿವೆ ಎಂದರು.
ರಾಜಾ ದೇಶವನ್ನು ಲೂಟಿ ಮಾಡುತ್ತಿರುವಾಗ ಪ್ರಧಾನ ಮಂತ್ರಿ ಸುಮ್ಮನಿದ್ದದ್ದು ಯಾಕೆ? ಈಗ ಜೆಪಿಸಿ ತನಿಖೆಗೆ ಒಪ್ಪಿಸಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂದೂ ಅಡ್ವಾಣಿ ಪ್ರಶ್ನಿಸಿದರು.
ಆರೆಸ್ಸೆಸ್ಸನ್ನು ನಿಷೇಧಿಸಿ ನೋಡಿ... ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಪ್ರತಿಯೊಂದಕ್ಕೂ ದೂಷಣೆ ಮಾಡಲಾಗುತ್ತಿದೆ. ಆಧಾರವಿಲ್ಲದ ಕಪೋಲಕಲ್ಪಿತ ಆರೋಪಗಳನ್ನು ಮಾಡಲಾಗುತ್ತಿದೆ. ಅದು ದೇಶಭಕ್ತ ಸಂಘಟನೆ.
ನಿಜಕ್ಕೂ ಕಾಂಗ್ರೆಸ್‌ಗೆ ದಮ್ಮಿದ್ದರೆ ಆರೆಸ್ಸೆಸ್ಸನ್ನು ನಿಷೇಧಿಸಿ ನೋಡಿ. ಅದರಿಂದ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಿ ಎಂದು ಬಿಜೆಪಿ ಮಾಜಿ ಅಧ್ಯಕ್ಷ ವೆಂಕಯ್ಯ ನಾಯ್ಡು ಸವಾಲು ಹಾಕಿದರು.