ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ನೇ ಶೇಮ್: ಪಾಕ್‌ನ ಮತ್ತೊಬ್ಬ ಮೋಸ್ಟ್ ವಾಂಟೆಡ್ ಇಲ್ಲೇ! (India Most Wanted List | Pakistan | India | Mumbai Blast | UPA | CBI)
ಕೇಂದ್ರ ಸರಕಾರ ತನ್ನ ವಿದೇಶಾಂಗ ನೀತಿಯಲ್ಲಿ ಮತ್ತೊಂದು ಮುಖಭಂಗ ಅನುಭವಿಸಿದೆ. ಪಾಕಿಸ್ತಾನಕ್ಕೆ ಕಳುಹಿಸಲಾದ 50 'ಮೋಸ್ಟ್ ವಾಂಟೆಡ್' ವ್ಯಕ್ತಿಗಳ ಪೈಕಿ ಒಬ್ಬಾತ ಥಾಣೆಯಲ್ಲೇ ಇರುವುದು ಎರಡು ದಿನಗಳ ಹಿಂದಷ್ಟೇ ಬೆಳಕಿಗೆ ಬಂದು, ಗೃಹ ಸಚಿವ ಪಿ.ಚಿದಂಬರಂ ಅವರು ಕ್ಷಮೆ ಯಾಚಿಸುವ ಹಂತಕ್ಕೆ ತಲುಪಿತ್ತು. ಇದೀಗ, ಇನ್ನೂ ಒಬ್ಬಾತ ಮುಂಬೈಯ ಆರ್ಥರ್ ರೋಡ್ ಜೈಲಿನಲ್ಲೇ ಇರುವುದು ಪತ್ತೆಯಾಗಿರುವುದರೊಂದಿಗೆ ಕೇಂದ್ರದ ಯುಪಿಎ ಸರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಭಾರತ ತಲೆ ತಗ್ಗಿಸುವಂತೆ ಮಾಡಿದೆ.

ಮುಂಬೈಯಲ್ಲಿ ರೈಲು ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ವಾಜುಲ್ ಖಾನ್ ಎಂಬಾತ ಥಾಣೆಯ ಮನೆಯಲ್ಲೇ ಇರುವುದು ಪತ್ತೆಯಾಗಿತ್ತು. ಆತನ ವಿರುದ್ಧ ಚಾರ್ಜ್ ಶೀಟ್ ಕೂಡ ಸಲ್ಲಿಸಲು ತನಿಖಾ ಏಜೆನ್ಸಿಗಳು ವಿಫಲವಾಗಿದ್ದರಿಂದಾಗಿ, ಆತ ಜಾಮೀನು ಪಡೆದು, ತಮ್ಮ ಕುಟುಂಬದೊಂದಿಗೆ ಹಾಯಾಗಿದ್ದ. 'ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ 50 ಮೋಸ್ಟ್ ವಾಂಟೆಡ್' ವ್ಯಕ್ತಿಗಳ ಪಟ್ಟಿಯಲ್ಲಿ ಈತನದು 41ನೇ ಹೆಸರು.

ಈಗ ಹೊಸದಾಗಿ ಬೆಳಕಿಗೆ ಬಂದಿರುವ ಪ್ರಕರಣದ ಪ್ರಕಾರ, ಫಿರೋಜ್ ಅಬ್ದುಲ್ ಖಾನ್ ಎಂಬಾತನ ಹೆಸರೂ ಪಾಕಿಸ್ತಾನಕ್ಕೆ ಸಲ್ಲಿಸಿದ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿತ್ತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿ ಆತ ಮುಂಬೈಯ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ.

ವಾಜುಲ್ ಖಾನ್ ಹೆಸರು ಸುದ್ದಿಮಾಧ್ಯಮಗಳಲ್ಲಿ ಬಿತ್ತರಗೊಂಡು, ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾದ ಬಳಿಕ ಸಿಬಿಐ ಈ ಪಟ್ಟಿಯಿಂದ ಆತನ ಹೆಸರು ಕೈಬಿಟ್ಟಿತ್ತು. ಈ ತಪ್ಪು ಹೇಗೆ ನುಸುಳಿತು ಎಂದು ತನಿಖೆಗೂ ಆದೇಶಿಸಲಾಗಿತ್ತು. ಇದೊಂದು ಐತಿಹಾಸಿಕ ಬ್ಲಂಡರ್ ಎಂದು ಬಿಜೆಪಿ ಬಣ್ಣಿಸಿತ್ತು. ಬಳಿಕ ಸ್ಪಷ್ಟನೆ ನೀಡುವಲ್ಲಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಸುಸ್ತಾಗಿದ್ದರಲ್ಲದೆ, ಖಂಡಿತವಾಗಿಯೂ ಇದೊಂದು ತಪ್ಪು ಎಂಬುದನ್ನು ಬುಧವಾರ ಒಪ್ಪಿಕೊಂಡು, ಹೊಣೆಯನ್ನೂ ಹೊತ್ತುಕೊಂಡಿದ್ದರು. ಇದು ಮುಂಬೈ ಪೊಲೀಸರು ಮಾಡಿದ 'ನಿಜವಾದ ತಪ್ಪು', ಅವರು ಸಿಬಿಐಗೆ ಈ ವಿಚಾರ ಹೇಳಿರಲೇ ಇಲ್ಲ ಎಂದಿದ್ದರಲ್ಲದೆ, ಗುಪ್ತಚರ ಮಂಡಳಿಯಿಂದಾದ ನಿರ್ಲಕ್ಷ್ಯ ಎಂದೂ ಹೇಳಿದ್ದರು.

ಮೋಸ್ಟ್ ವಾಂಟೆಡ್ ನಂ.24 ಫಿರೋಜ್ ಖಾನ್‌ನನ್ನು ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಈತನನ್ನು ಬಂಧಿಸಿ, ಬಳಿಕ ಜುಲೈ ತಿಂಗಳಲ್ಲಿ ಸಿಬಿಐ ವಶಕ್ಕೆ ಒಪ್ಪಿಸಲಾಗಿತ್ತು.

ದೇಶದೆಲ್ಲೆಡೆ ನಡೆಯುತ್ತಿರುವ ದಾಳಿಗಳಲ್ಲಿ ಪಾಕಿಸ್ತಾನದ ವ್ಯಕ್ತಿಗಳ ಕೈವಾಡವಿದೆ, ಹೆಚ್ಚಿನವರು ನಿಮ್ಮ ನೆಲದಿಂದಲೇ ಕಾರ್ಯಾಚರಿಸುತ್ತಿದ್ದಾರೆ, ದಾವೂದ್ ಇಬ್ರಾಹಿಂ ಮುಂತಾದವರು ಕೂಡ ಇದ್ದಾರೆ ಎಂದೆಲ್ಲಾ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಲೇ ಬಂದಿತ್ತು. ಆದರೆ, ಪಾಕಿಸ್ತಾನಕ್ಕೆ ಸಲ್ಲಿಸಿರುವ ಪಟ್ಟಿಯಲ್ಲಿ ಒಬ್ಬೊಬ್ಬರೇ ಇಲ್ಲೇ ಇರುವುದು ಪತ್ತೆಯಾಗಿರುವುದರೊಂದಿಗೆ, ಭಾರತವು ಸುಳ್ಳು ಹೇಳುತ್ತಿದೆ ಎಂದು ಪಾಕಿಸ್ತಾನವು ವಾದಿಸಲು ಒಳ್ಳೆಯ ಆಯುಧ ಒದಗಿಸಿಕೊಟ್ಟಂತಾಗಿದೆ.

ಈ ಮಧ್ಯೆ, ಕೇಂದ್ರ ಸರಕಾರವು ಉಗ್ರಗಾಮಿಗಳನ್ನು, ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಗಂಭೀರತೆ ಹೊಂದಿದೆ ಎಂಬುದು ಇದರಿಂದ ಅರಿವಾಗುತ್ತದೆ ಎಂದು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಸಿಬಿಐಯಂತಹಾ ದೊಡ್ಡ ತನಿಖಾ ಏಜೆನ್ಸಿಯೊಂದು ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಸೂಚನೆಯಿದು ಎಂದೂ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಕಿಡಿ ಕಾರಿದ್ದಾರೆ.
ಇವನ್ನೂ ಓದಿ