ಪಾಕಿಸ್ತಾನದ ನೆಲವನ್ನು ಭಾರತದ ವಿರುದ್ಧ ಭಯೋತ್ಪಾದನೆಗೆ ಬಳಸಬಾರದು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಅಧ್ಯಕ್ಷ ಜರ್ದಾರಿ ಅವರಿಗೆ ಮಾಧ್ಯಮದ ಎದುರೇ ಸಂದೇಶ ನೀಡಿದ್ದು ಪಾಕಿಸ್ತಾನಕ್ಕೆ ಮುಜುಗರಕ್ಕೀಡು ಮಾಡಿದೆ. ಸಿಂಗ್ ಅವರ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದು ಇಸ್ಲಾಮಾಬಾದ್ ತಿಳಿಸಿದೆ.
ಸಂಸತ್ತಿನ ಮೇಲ್ಮನೆ ಅಥವಾ ಸೆನೆಟ್‌ನಲ್ಲಿ ಹೇಳಿಕೆ ನೀಡಿದ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ಮಲಿಕ್ ಅಮಾದ್ ಖಾನ್, ರಷ್ಯಾದಲ್ಲಿ ಸಿಂಗ್ ಅವರು ನೀಡಿದ ಪ್ರತಿಕ್ರಿಯೆ ಸ್ವೀಕಾರಾರ್ಹವಲ್ಲ ಎಂದು ತಿಳಿಸಿದ್ದಾರೆ.ಶಾಂಘಾಯ್ ಸಹಕಾರ ಸಂಘಟನೆ ಶೃಂಗಸಭೆಯ ನೇಪಥ್ಯದಲ್ಲಿ ಜರ್ದಾರಿ ಜತೆ ಸಿಂಗ್ ಮಾತನಾಡುತ್ತಾ, "ನಿಮ್ಮನ್ನು ಭೇಟಿ ಮಾಡಿದ್ದರಿಂದ ತೀವ್ರ ಸಂತೋಷವಾಗಿದೆ.
ಆದರೆ ಪಾಕಿಸ್ತಾನದ ನೆಲವನ್ನು ಭಾರತದ ವಿರುದ್ಧ ಭಯೋತ್ಪಾದನೆಗೆ ಬಳಸಬಾರದು' ಎಂದು ಕಟುವಾದ ಮಾತಿನಿಂದ ಹೇಳಿದ್ದರು.ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಜಗಳಗಂಟತನದ ಮಾಧ್ಯಮ ಹೇಳಿಕೆಗಳನ್ನು ನೀಡಬಾರದೆಂದು ಖಾನ್ ತಿಳಿಸಿದ್ದಾರೆ.
ಮಾದ್ಯಮವನ್ನು ಬಳಸಿಕೊಳ್ಳುವ ಬದಲಿಗೆ ಪಾಕಿಸ್ತಾನದ ಜತೆ ನೇರವಾಗಿ ಮಾತನಾಡಿ ಸಂದೇಹ ನಿವಾರಿಸಿಕೊಳ್ಳಲಿ ಎಂದು ಖಾನ್ ಹೇಳಿದ್ದಾರೆ. ಕಳೆದ 6 ತಿಂಗಳಲ್ಲಿ ಭಾರತೀಯ ಅಧಿಕಾರಿಗಳು ಕೆಲವು ಅಸೂಕ್ತ ಹೇಳಿಕೆಗಳನ್ನು ನೀಡುತ್ತಿದ್ದು, ರಾಜತಾಂತ್ರಿಕ ನಿಯಮಗಳಿಗೆ ವಿರುದ್ಧವಾಗಿವೆ ಎಂದು ಖಾನ್ ಹೇಳಿದ್ದಾರೆ. |