ಇಸ್ಲಾಮಾಬಾದ್, ಶುಕ್ರವಾರ, 23 ಅಕ್ಟೋಬರ್ 2009( 11:10 IST )
ಪಂಜಾಬ್ ಪ್ರಾಂತ್ಯದ ಆಯಕಟ್ಟಿನ ವಾಯುಪಡೆ ಸಂಕೀರ್ಣದ ಬಳಿಯ ಚೌಕಿಯೊಂದರಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡಿದ್ದರಿಂದ ಕನಿಷ್ಠ 7 ಮಂದಿ ಹತರಾಗಿ, 12 ಜನರು ಗಾಯಗೊಂಡಿದ್ದು, ಪಾಕಿಸ್ತಾನದ ಉಗ್ರಗಾಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ.
ಭದ್ರತಾ ಪಡೆಗಳ ಮೇಲೆ ಉಗ್ರರು ನಡೆಸುತ್ತಿರುವ ಮಾರಣಾಂತಿಕ ಸರಣಿ ದಾಳಿಗಳಿಗೆ ಈ ದಾಳಿ ಹೊಸದಾಗಿ ಸೇರ್ಪಡೆಯಾಗಿದೆ. ಮಿಲಿಟರಿ ಸಂಕೀರ್ಣವು ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮದ ಜತೆ ನಂಟುಹೊಂದಿದೆಯೆಂದು ವರದಿಯಾಗಿದ್ದು, ಈ ದಾಳಿಯಿಂದಾಗಿ ಉಗ್ರಗಾಮಿಗಳು ಪಾಕ್ ಅಣ್ವಸ್ತ್ರ ದಾಸ್ತಾನಿನ ಮೇಲೆ ಕಣ್ಣಿರಿಸಿದ್ದಾರೆಂಬ ಅಮೆರಿಕದ ಕಳವಳ ನಿಜವಾಗಿದೆ.
ಪಂಜಾಬ್ ಕಾಮ್ರಾದ ದಂಡುಪ್ರದೇಶದಲ್ಲಿ ಪಾಕಿಸ್ತಾನ ವಾಯುಪಡೆ ಸಂಕೀರ್ಣದ ಹೊರಗೆ ಚೆಕ್‌ಪೋಸ್ಟ್ ಬಳಿಗೆ ಧಾವಿಸಿದ ಬಾಂಬರ್‌ನನ್ನು ಭದ್ರತಾ ಸಿಬ್ಬಂದಿ ತಡೆದ ಕೂಡಲೇ ಅವನು ಸ್ಫೋಟಕಗಳನ್ನು ಸಿಡಿಸಿದ ಎಂದು ಪೊಲೀಸ್ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಟಿವಿ ಸುದ್ದಿಚಾನೆಲ್‌ಗಳು ವರದಿಮಾಡಿವೆ. ಸ್ಫೋಟದ ಸ್ಥಳದಲ್ಲಿ ರಸ್ತೆಯ ಮೇಲೆ ಹಲವಾರು ಬೈಸಿಕಲ್‌ಗಳು ಬಿದ್ದಿದ್ದನ್ನು ಕಂಡಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬ ಹೇಳಿದ್ದಾನೆ.
ಸ್ಫೋಟದಿಂದ ಸಮೀಪದ ಕಟ್ಟಡಗಳಿಗೆ ಹಾನಿಯಾಗಿಲ್ಲವೆಂದು ವರದಿಯಾಗಿದೆ. ಸ್ಫೋಟ ಸಂಭವಿಸಿದ ಕೂಡಲೇ ಭದ್ರತಾಪಡೆಗಳು ಪ್ರದೇಶವನ್ನು ಸುತ್ತುವರಿದವು.ಪಾಕಿಸ್ತಾನದ ತೆಹ್ರಿಕ್-ಎ--ತಾಲಿಬಾನ್ ಮೇಲೆ ಸಂಶಯದ ಬೆಟ್ಟು ಚಾಚಿದ್ದರೂ, ದಾಳಿಗೆ ಯಾವುದೇ ಸಂಘಟನೆ ಹೊಣೆ ಹೊತ್ತಿಲ್ಲವೆಂದು ತಿಳಿದುಬಂದಿದೆ.
ದಕ್ಷಿಣ ವಜಿರಿಸ್ತಾನದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಸೆಡ್ಡು ಹೊಡೆದಿರುವ ತಾಲಿಬಾನ್ ಕಳೆದ ಎರಡುವಾರಗಳಿಂದ ಸತತ ದಾಳಿಗಳನ್ನು ಮತ್ತು ಆತ್ಮಾಹುತಿ ಬಾಂಬ್ ದಾಳಿಗಳನ್ನು ನಡೆಸುತ್ತಿದೆ. ಬಹುತೇಕ ದಾಳಿಗಳನ್ನು ಭದ್ರತಾಪಡೆಗಳ ಮೇಲೆ ಗುರಿಯಾಗಿಸಿದೆ.