ಮೆಲ್ಬೋರ್ನ್, ಶುಕ್ರವಾರ, 23 ಅಕ್ಟೋಬರ್ 2009( 17:20 IST )
ಭಾರತೀಯ ವಿದ್ಯಾರ್ಥಿಯೊಬ್ಬನ ಮೇಲೆ ಮಾರಣಾಂತಿಕ ದಾಳಿ ಮಾಡಿದ ಆಸ್ಟ್ರೇಲಿಯದ ವ್ಯಕ್ತಿಯೊಬ್ಬನಿಗೆ ನಾಲ್ಕೂವರೆ ವರ್ಷಗಳ ಜೈಲುಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಮೆಲ್ಬೋರ್ನ್ ದಿನಸಿ ಅಂಗಡಿಯಲ್ಲಿ ಸುಖರಾಜ್ ಸಿಂಗ್ ಎಂಬ ಭಾರತೀಯನ ಮೇಲೆ ಯುವಕರ ಗುಂಪೊಂದು ಮಾರಣಾಂತಿಕ ದಾಳಿ ನಡೆಸಿದ ಬಳಿಕ ಸಿಂಗ್ ಕೋಮಾ ಸ್ಥಿತಿಗೆ ತಲುಪಿದ್ದರು.
ಸಮೀಪದ ಬಸ್‌ನಿಲ್ದಾಣದ ಆಸನದಿಂದ ಹರಿದ ಮರದ ಹಲಗೆಗಳನ್ನು ಹಿಡಿದಿದ್ದ 7 ಮಂದಿ ಯುವಕರು ಸನ್‌ಶೈನ್ ಇಂಪೆಕ್ಸ್ ಶಾಪ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ, 'ನೀವು ಭಾರತೀಯರೇ 'ಎಂದು ಕೇಳಿದ ಬಳಿಕ ತಮ್ಮಲ್ಲಿದ್ದ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಎದೆಯಲ್ಲಿ ಮತ್ತು ತಲೆಗೆ ತೀವ್ರ ಗಾಯಗಳಾದ ಸುಖರಾಜ್ ಸಿಂಗ್ ಅವರು 15 ದಿನಗಳವರೆಗೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ಸಿಂಗ್ ತಲೆಗೆ ಪೆಟ್ಟುಬಿದ್ದು, ಮೆದುಳಿಗೆ ತೀವ್ರ ಗಾಯಗಳುಂಟಾದ ಪರಿಣಾಮವನ್ನು ಜೀವನಪರ್ಯಂತ ಅನುಭವಿಸಬೇಕಿದೆ. 8 ಮಂದಿಯ ಮೇಲೆ ಹಲ್ಲೆ ಮಾಡಲಾಯಿತಾದರೂ ಸಿಂಗ್ ಅವರಿಗೆ ಪ್ರಜ್ಞೆ ತಪ್ಪುವ ತನಕ ಥಳಿಸಿದ್ದರಿಂದ ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಕಳೆದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶೆ ಪಮೇಲಾ ಜೆನ್ಕಿನ್ಸ್, ದುಷ್ಕರ್ಮಿಗಳ ಗುಂಪು ಉದ್ದೇಶಪೂರ್ವಕವಾಗಿ ಭಾರತೀಯ ಜನಾಂಗದವರ ಮೇಲೆ ಹಲ್ಲೆಗೆ ಗುರಿಯಿರಿಸಿದ್ದರೆಂದು ತೀರ್ಪು ನೀಡಿದ್ದು, ದಾಳಿಕೋರರಲ್ಲಿ ಒಬ್ಬನಾದ 21ರ ಪ್ರಾಯದ ಜಕಾರೀ ಹುಸೇನ್‌ಗೆ ನಾಲ್ಕುವರೆ ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 2 ವರ್ಷಗಳವರೆಗೆ ಪೆರೋಲ್‌ರಹಿತ ಶಿಕ್ಷೆಯನ್ನು ವಿಧಿಸಿದ್ದಾರೆ.