ಇಸ್ಲಾಮಾಬಾದ್, ಶುಕ್ರವಾರ, 23 ಅಕ್ಟೋಬರ್ 2009( 18:38 IST )
ಇಲ್ಲಿನ ಮೊಹಮಂಡ್ ಏಜೆನ್ಸಿ ಬಳಿ ನೆಲಬಾಂಬ್ ಸ್ಫೋಟದಿಂದ ಮದುವೆ ದಿಬ್ಬಣ ಒಯ್ಯುತ್ತಿದ್ದ ಬಸ್ಸೊಂದು ಸ್ಫೋಟಿಸಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 18 ಜನರು ಬಲಿಯಾಗಿದ್ದಾರೆ. ಪಂಜಾಬ್ ಪ್ರಾಂತ್ಯದ ಅಣ್ವಸ್ತ್ರ ಸೌಲಭ್ಯದ ಬಳಿ ಬೆಳಿಗ್ಗೆ ನಡೆದ ದಾಳಿಯಲ್ಲಿ 7 ಮಂದಿ ಹತರಾದ ಬಳಿಕ ವಾಯವ್ಯ ಪೇಶಾವರದಲ್ಲಿ ಉಪಹಾರಗೃಹದ ಹೊರಗೆ ಸಂಭವಿಸಿದ ಭಾರೀ ಸ್ಫೋಟದಿಂದ 10 ಮಂದಿ ಗಾಯಗೊಂಡಿದ್ದರು.
ಮೂರನೇ ಸ್ಫೋಟವು ಉಗ್ರಗಾಮಿಗಳ ವಿರುದ್ಧ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದಾಗ ಮೊಹಮಂಡ್ ಏಜೆನ್ಸಿಯ ಹೊರವಲಯದ ಲಕಾರೊ ಉಪವಿಭಾಗದಲ್ಲಿ ಸಂಭವಿಸಿದೆ. ಭದ್ರತಾಪಡೆಗಳಿಗೆ ಗುರಿಯಿರಿಸಿ ಉಗ್ರಗಾಮಿಗಳು ಈ ನೆಲಬಾಂಬ್‌ಗಳನ್ನು ಹುದುಗಿಸಿದ್ದಾಗ ಆಕಸ್ಮಿಕವಾಗಿ ಮದುವೆ ದಿಬ್ಬಣದ ಜನರು ಸತ್ತಿದ್ದಾರೆಂದು ವರದಿಯಾಗಿದೆ.
ಪೇಶಾವರದ ಸ್ಪೋಟದಲ್ಲಿ ಹೊರವಲಯದ ಹಯಾತಾಬಾದ್ ಪ್ರದೇಶದ ಉಪಹಾರ ಗೃಹದ ಹೊರಗೆ ವ್ಯಕ್ತಿಯೊಬ್ಬ ಕಾರೊಂದನ್ನು ನಿಲ್ಲಿಸಿದ ಕೂಡಲೇ ಸ್ಫೋಟ ಸಂಭವಿಸಿತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಉದ್ದದ ತಲೆಕೂದಲು ಹೊಂದಿದ್ದ ವ್ಯಕ್ತಿ ಕಾರನ್ನು ನಿಲ್ಲಿಸಿದ ಕೂಡಲೇ ಪರಾರಿಯಾಗಿದ್ದನೆಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಒಯ್ಯಲಾಗಿದ್ದು, ಅವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಪಾಕಿಸ್ತಾನವು ಕಳೆದ ಎರಡುವಾರಗಳಿಂದ ತಾಲಿಬಾನಿಗಳಿಂದ ಮಾರಕ ಬಾಂಬ್ ದಾಳಿಗಳು ಮತ್ತು ಆತ್ಮಾಹುತಿ ಸರಣಿ ದಾಳಿಗಳಿಗೆ ಸಾಕ್ಷಿಯಾಗಿದ್ದು, ಅನೇಕ ದಾಳಿಗಳನ್ನು ಭದ್ರತಾಪಡೆಗಳ ಮೇಲೆ ಗುರಿಯಿರಿಸಲಾಗಿದೆ.