ಇಸ್ಲಾಮಾಬಾದ್, ಶನಿವಾರ, 24 ಅಕ್ಟೋಬರ್ 2009( 17:49 IST )
ದಕ್ಷಿಣ ವಜಿರಿಸ್ತಾನದಲ್ಲಿ ತಾಲಿಬಾನ್ ಹಿಡಿತದಲ್ಲಿದ್ದ ಕೊಟ್ಕೈಯ್ ಪಟ್ಟಣವನ್ನು ಪಾಕಿಸ್ತಾನ ಪಡೆಗಳು ಕೈವಶಮಾಡಿಕೊಂಡಿವೆಯೆಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ವಜಿರಿಸ್ತಾನದಲ್ಲಿ ಪಾಕಿಸ್ತಾನ ಸೇನೆ ಕಳೆದ ವಾರ ಕಾರ್ಯಾಚರಣೆ ಆರಂಭಿಸಿದ ಬಳಿಕ ತಾಲಿಬಾನ್ ಉನ್ನತ ನಾಯಕ ಹಕೀಮುಲ್ಲಾ ಮೆಹ್ಸೂದ್‌ನ ಹುಟ್ಟೂರಾದ ಕೊಟ್ಕೈಯ್‌ನಲ್ಲಿ ಭೀಕರ ಹೋರಾಟ ನಡೆಯುತ್ತಿದೆ.
ಸುಮಾರು ಒಂದು ಲಕ್ಷ ನಾಗರಿಕರು ಸಂಘರ್ಷ ವಲಯದಿಂದ ಸ್ಥಳಾಂತರ ಮಾಡಿದ್ದಾರೆ. ಈ ವಾರದ ಆದಿಯಲ್ಲಿ ಪಾಕಿಸ್ತಾನ ಪಡೆಗಳು ಫಿರಂಗಿಗಳು, ಹೆಲಿಕಾಪ್ಟರ್‌ಗಳು ಮತ್ತು ಸಮರಜೆಟ್‌ಗಳ ನೆರವಿನಿಂದ ಕೊಟ್ಕೈಯ್ ಪ್ರದೇಶವನ್ನು ಕೈವಶ ಮಾಡಿದ್ದವು. ಆದರೆ ಮಂಗಳವಾರ ಬೆಳಿಗ್ಗೆ, ತಾಲಿಬಾನ್ ಪ್ರತಿದಾಳಿ ಮಾಡಿ ಸೇನಾ ಚೌಕಿಗಳನ್ನು ನಾಶಮಾಡಿದ್ದಲ್ಲದೇ 7 ಮಂದಿ ಸೈನಿಕರನ್ನು ಕೊಂದಿದ್ದರು. ಬಳಿಕ ಶನಿವಾರ ಭದ್ರತಾಪಡೆಗಳು ಕೊಟ್ಕೈಯ್ ಪ್ರದೇಶವನ್ನು ರಾತ್ರೋರಾತ್ರಿ ವಶಕ್ಕೆ ತೆಗೆದುಕೊಂಡು, ಉಗ್ರರಿಂದ ಸಂಪೂರ್ಣ ಮುಕ್ತಗೊಳಿಸುವ ಕಾರ್ಯ ಪ್ರಗತಿಯಲ್ಲಿದೆಯೆಂದು ಅಧಿಕಾರಿಯೊಬ್ಬರು ತಿಳಿಸಿದರು.
ಇದು ತಾಲಿಬಾನ್ ಭದ್ರನೆಲೆ ಮತ್ತು ಹಕೀಮುಲ್ಲಾ ಮೆಹ್ಸೂದ್ ಮತ್ತು ಖಾರಿ ಹುಸೇನ್ ಅವರ ತವರುಪಟ್ಟಣವಾದ್ದರಿಂದ ಇದೊಂದು ಪ್ರಮುಖ ಬೆಳವಣಿಗೆಯಾಗಿದೆಯೆಂದು ಹೇಳಿದ್ದಾರೆ. ಉಗ್ರಗಾಮಿಗಳ ಭದ್ರನೆಲೆಯಾದ ಈ ಪ್ರದೇಶದಲ್ಲಿ ದೂರದವರೆಗೆ ಸೇನೆ ತೆರಳಿದ್ದು, ಪರ್ವತಪ್ರದೇಶಗಳಲ್ಲೂ ಹೋರಾಟ ನಡೆಯುವುದೆಂದು ನಿರೀಕ್ಷಿಸಲಾಗಿದೆ.