ನ್ಯಾಯಮೂರ್ತಿಗಳ ಸಚಿವಾಲಯ ಹಾಗೂ ಸರ್ಕಾರಿ ಕಟ್ಟಡಗಳನ್ನು ಗುರಿಯಾಗಿರಿಸಿಕೊಂಡು ಭಾನುವಾರ ಉಗ್ರಗಾಮಿಗಳು ನಡೆಸಿದ ಎರಡು ಆತ್ಮಹತ್ಯಾ ಕಾರ್ ಬಾಂಬ್ ಸ್ಫೋಟದಿಂದ ಸುಮಾರು 30ಮಂದಿ ಸಾವನ್ನಪ್ಪಿದ್ದು, 40ಮಂದಿ ಗಾಯಗೊಂಡಿದ್ದಾರೆ.
ಅಲ್ ಖಾಯಿದಾ ಉಗ್ರರು ಪ್ರಾಬಲ್ಯ ಹೊಂದಿರುವ ಇರಾಕ್‌ನಲ್ಲಿ ಉಗ್ರರನ್ನು ಬಗ್ಗುಬಡಿಯಲು ಅಮೆರಿಕ ಸೈನಿಕ ಪಡೆ ಹರಸಾಹಸ ಪಡುತ್ತಿದ್ದರೂ ಕೂಡ ಇಲ್ಲಿ ಬಾಂಬ್ ಸ್ಫೋಟ, ಸಾವು-ನೋವು ನಿರಂತರವಾಗಿದೆ.
ಇಂದು ಬೆಳಿಗ್ಗೆ ಟೈಗ್ರಿಸ್ ನದಿ ಸಮೀಪ ಪ್ರಬಲವಾದ ಅವಳಿ ಕಾರ್ ಬಾಂಬ್ ಸ್ಫೋಟಗೊಂಡ ಪರಿಣಾಮ ಸೆಂಟ್ರಲ್ ಬಾಗ್ದಾದ್ ಪ್ರದೇಶದ ತುಂಬಾ ಹೊಗೆಯಿಂದ ತುಂಬಿ ಹೋಗಿತ್ತು. ಘಟನೆಯಲ್ಲಿ 30ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಗೋಸ್ಟ್ ತಿಂಗಳಿನಲ್ಲಿ ಎರಡು ಟ್ರಕ್ ಬಾಂಬ್ ಸ್ಫೋಟಗೊಂಡ ಪರಿಣಾಮ ನೂರು ಮಂದಿ ಸಾವನ್ನಪ್ಪಿದ್ದರು. ಆ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಬಾಂಬ್ ಸ್ಫೋಟ ಪ್ರಬಲವಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.