ಇಸ್ಲಾಮಾಬಾದ್, ಶನಿವಾರ, 24 ಅಕ್ಟೋಬರ್ 2009( 19:17 IST )
ಮುಂಬೈ ಭಯೋತ್ಪಾದನೆ ದಾಳಿ ಪ್ರಕರಣದ ಏಳು ಮಂದಿ ಪ್ರಮುಖ ಶಂಕಿತರ ವಿಚಾರಣೆಯನ್ನು ನಡೆಸಲು ಹೊಸ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಲಾಗಿದೆ. ಭದ್ರತಾ ಕಾರಣಗಳನ್ನು ಉದಾಹರಿಸಿ ತಮಗೆ ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದು ನ್ಯಾಯಾಧೀಶ ಬಕೀರ್ ಅಲಿ ರಾನಾ ಕೈಚೆಲ್ಲಿದ ಬಳಿಕ ಅವರ ಬದಲಿಗೆ ಹೊಸ ನ್ಯಾಯಾಧೀಶರ ನೇಮಕ ಮಾಡಲಾಗಿದೆ.
ಲಾಹೋರ್ ಹೈಕೋರ್ಟ್ ಮುಖ್ಯನ್ಯಾಯಾಧೀಶ ಕ್ವಾಜಾ ಮೊಹಮದ್ ಶರೀಫ್ ಅವರ ಆದೇಶದ ಮೇಲೆ ಭಯೋತ್ಪಾದನೆ ನಿಗ್ರಹ ಕೋರ್ಟ್ ನ್ಯಾಯಾಧೀಶ ಮಲಿಕ್ ಮೊಹಮದ್ ಅಕ್ರಮ್ ಅವಾನ್ ರಾನಾ ಅವರನ್ನು ಬದಲಿಸಿದರು. ಏಳು ಮಂದಿ ಭಯೋತ್ಪಾದನೆ ಶಂಕಿತರ ರಹಸ್ಯ ವಿಚಾರಣೆಯನ್ನು ಬಿಗಿ ಭದ್ರತೆಯ ಅಡಿಯಾಲ ಜೈಲಿನಲ್ಲಿ ರಾನಾ ನಡೆಸುತ್ತಿದ್ದು, ಲಷ್ಕರೆ ತೊಯ್ಬಾ ಮುಖಂಡರಾದ ಜಾಕಿರ್ ರೆಹ್ಮಾನ್ ಲಖ್ವಿ ಮತ್ತು ಜರಾರ್ ಷಾ ಸಹ ಶಂಕಿತರಲ್ಲಿ ಸೇರಿದ್ದಾರೆ.
ಭದ್ರತಾ ಕಾರಣಗಳಿಗಾಗಿ ಪ್ರಕರಣದಿಂದ ಮುಕ್ತಗೊಳಿಸಬೇಕೆಂದು ರಾನಾ ಮನವಿ ಮಾಡಿದ್ದರಿಂದ ಮುಖ್ಯನ್ಯಾಯಾಧೀಶರು ಆದೇಶ ಜಾರಿ ಮಾಡಿದರೆಂದು ಮೂಲಗಳು ತಿಳಿಸಿವೆ. ಅ.10ರಂದು ಶಂಕಿತರ ವಿಚಾರಣೆಯನ್ನು ವಕೀಲರ ಅನುಪಸ್ಥಿತಿಯಲ್ಲೇ ನಡೆಸಿ ಆರೋಪಿಗಳನ್ನು ತಪ್ಪಿತಸ್ಥರೆಂದು ರಾನಾ ತೀರ್ಪಿತ್ತ ಬಳಿಕ ಅವರು ಲಷ್ಕರೆ ತೊಯ್ಬಾದಿಂದ ಬೆದರಿಕೆಯ ಕರೆಗಳನ್ನು ಸ್ವೀಕರಿಸಿದ್ದರೆಂದು ವರದಿಯಾಗಿದೆ.