ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದು ತಮ್ಮ ರಾಷ್ಟ್ರೀಯ ಮೌಲ್ಯಗಳಿಗೆ ವಿರುದ್ಧವಾದುದು ಎಂದು ಹೇಳಿರುವ ಫ್ರಾನ್ಸಿನ ವಲಸೆ ಸಚಿವರು, ಮುಸ್ಲಿಂ ಮಹಿಳೆಯರು ಮುಖ ಮುಚ್ಚವಂತಹ ಬುರ್ಖಾಗಳನ್ನು ಧರಿಸಬಾರದು ಎಂಬ ಸಲಹೆ ಮಾಡುವ ಮೂಲಕ ಹೊಸ ರಾಷ್ಟ್ರೀಯ ಚರ್ಚೆಯೊಂದನ್ನು ಹುಟ್ಟುಹಾಕಿದ್ದಾರೆ.
ಬೀದಿಗಳಲ್ಲಿ ಬುರ್ಖಾಗಳು ಇರಬಾರದು ಎಂಬುದಾಗಿ ಎರಿಕ್ ಬೆಸ್ಸನ್ ಅವರು ದೂರದರ್ಶನ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಧರಿಸುವಂತ ಸಂಪೂರ್ಣ ಮುಚ್ಚುವ ಬುರ್ಖಾಧಾರಣೆಯನ್ನು ಅವರು ವಿರೋಧಿಸಿದ್ದಾರಾದರೂ, ನೇರವಾಗಿ ಬುರ್ಖಾ ನಿಷೇಧಕ್ಕೆ ಅವರು ಸಲಹೆ ನೀಡಲಿಲ್ಲ, ಬದಲಿಗೆ ಇದು ಕಾನೂನು ನಿರ್ಮಾಪಕರಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಬುರ್ಖಾ ಧಾರಣೆಯು ರಾಷ್ಟ್ರೀಯ ಮೌಲ್ಯಗಳಿಗೆ ವಿರುದ್ಧವಾದುದಾಗಿದೆ ಮತ್ತು ಇದು ಮಹಿಳೆಯರ ಹಕ್ಕಿಗೆ ವಿರೋಧವಾಗಿದ್ದು, ಫ್ರಾನ್ಸಿನ ಸಮಾನತೆಯ ಬದ್ಧತೆಗೆ ಅಡ್ಡಿಯಾಗುತ್ತದೆ ಎಂದು ಬೆಸ್ಸನ್ ಹೇಳಿದ್ದಾರೆ.
ಬುರ್ಖಾವು ಮಹಿಳೆಯನ್ನು ಬಂಧನದಲ್ಲಿರಿಸುತ್ತದೆ ಎಂದು ಹೇಳಿರುವ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು, ಇದು ಫ್ರಾನ್ಸಿನಲ್ಲಿ ಸ್ವಾಗತಾರ್ಹವಲ್ಲ ಎಂದಿದ್ದಾರೆ. ಮುಸ್ಲಿಂ ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ವೇಳೆ ತಲೆಯಿಂದ ಕಾಲಿನ ತನಕ ಮುಚ್ಚುವಂತಹ ಬುರ್ಖಾಗಳನ್ನು ನಿಷೇಧಿಸುವ ಕುರಿತು ಕಾನೂನು ರೂಪಿಸಲು ಫ್ರಾನ್ಸ್ ಸಂಸದೀಯ ಆಯೋಗವು ಆರು ತಿಂಗಳ ವಿಚಾರಣೆ ನಡೆಸುತ್ತಿದೆ.
ಬೆಸ್ಸನ್ ಅವರು ಎರಡೂವರೆ ತಿಂಗಳ ರಾಷ್ಟ್ರೀಯ ಏಕತೆಯ ಮಹಾನ್ ಚರ್ಚೆಗೆ ಸಲಹೆ ಮಾಡಿದ್ದಾರೆ.