ಪಾಕಿಸ್ತಾನದ ವಾಯುವ್ಯ ಬಾಜುರ್ ಬುಡಕಟ್ಟು ಪ್ರದೇಶದ ಐದು ಕಮಾಂಡರ್ ಸೇರಿದಂತೆ ತಾಲಿಬಾನ್ ಪರ 64 ಉಗ್ರಗಾಮಿಗಳು ಶುಕ್ರವಾರ ಶರಣಾಗಿರುವುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಮಾಮಂಡ್ ಪ್ರದೇಶದ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಿಸುತ್ತಿದ್ದ ಒಟ್ಟು 64ಮಂದಿ ಉಗ್ರರು ಭದ್ರತಾ ಪಡೆಗಳ ಮುಂದೆ ಶರಣಾಗಿರುವುದಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಅಲ್ಲದೇ ಇನ್ಮುಂದೆ ಶಸ್ತ್ರಾಸ್ತ್ರವನ್ನು ಕೈಗೆತ್ತಿಕೊಳ್ಳದೆ ಶಾಂತಿಯುತ ಜೀವನ ನಡೆಸುವುದಾಗಿ ಉಗ್ರರು ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.
ಅದೇ ರೀತಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ನಡೆಸುತ್ತಿರುವ ಹೋರಾಟಕ್ಕೂ ಸಂಪೂರ್ಣ ಸಹಕಾರ ನೀಡುವುದಾಗಿಯೂ ಈ ಸಂದರ್ಭದಲ್ಲಿ ವಾಗ್ದಾನ ನೀಡಿದ್ದಾರೆ. ಶರಣಾದ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
135 ಎ.ಕೆ.47, 55ರಾಕೆಟ್ ಲಾಂಚರ್, 40 ಆರ್ಟಿಲ್ಲರಿ ಶೆಲ್ಸ್, 25 ರಿಮೋಟ್ ಕಂಟ್ರೋಲ್ ಬಾಂಬ್ಸ್ ಮತ್ತು ಅಪಾರ ಪ್ರಮಾಣದ ಸ್ಫೋಟಕ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಅಲಿ ನಖ್ವಿ ತಿಳಿಸಿದ್ದಾರೆ.