ಮುಂಬೈ ದಾಳಿಯಲ್ಲಿ ಪಾಕ್ ಆರ್ಮಿ ಕೈವಾಡವಿಲ್ಲ: ಪಾಕ್ ತಿರುಗೇಟು
ಇಸ್ಲಾಮಾಬಾದ್, ಶುಕ್ರವಾರ, 11 ಜೂನ್ 2010( 13:24 IST )
ಮುಂಬೈ ದಾಳಿಯ ಸಂಚನ್ನು ಲಷ್ಕರ್ ಇ ತೊಯ್ಬಾ ರೂಪಿಸಿದ್ದು, ಅದರಲ್ಲಿ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ಶಾಮೀಲಾಗಿದ್ದರು ಎಂಬ ಬಂಧಿತ ಡೇವಿಡ್ ಹೆಡ್ಲಿಯ ಆರೋಪವನ್ನು ಪಾಕಿಸ್ತಾನ ತಳ್ಳಿಹಾಕಿದ್ದು, ಇದು ದೇಶದ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶ ಎಂದು ದೂರಿದೆ.
ಮುಂಬೈ ದಾಳಿ ಕುರಿತಂತೆ ಅಮೆರಿಕದಲ್ಲಿ ಡೇವಿಡ್ ಹೆಡ್ಲಿಯನ್ನು ಭಾರತದ ಎನ್ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ, ಪಾಕಿಸ್ತಾನದ ಆರ್ಮಿ ಅಧಿಕಾರಿಗಳು ಭಾಗಿ ಎಂಬ ಭಾರತದ ಮಾಧ್ಯಮಗಳ ವರದಿ ಕುರಿತಂತೆ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಬಾಸಿಟ್, ಇದೊಂದು ಸುಳ್ಳು ಆರೋಪವಾಗಿದೆ. ಅಲ್ಲದೇ ನಮ್ಮ ಭದ್ರತಾ ಏಜೆನ್ಸಿ ಮತ್ತು ಪಾಕಿಸ್ತಾನದ ವಿರುದ್ಧ ಕೆಟ್ಟ ಹೆಸರು ತರುವ ಆರೋಪವಾಗಿದೆ ಎಂದು ತಿಳಿಸಿದ್ದಾರೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಆರ್ಮಿ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ಮಾಧ್ಯಮಗಳ ವರದಿ ಆಧಾರರಹಿತವಾದದ್ದು. ಇದೊಂದು ಪ್ರಮುಖವಾದ ಘಟ್ಟವಾಗಿದೆ. ಯಾಕೆಂದರೆ ಉಭಯ ದೇಶಗಳ ನಡುವಿನ ಶಾಂತಿ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ಭಾರತ ಮತ್ತು ಪಾಕಿಸ್ತಾನ ಒಮ್ಮತದ ಅಭಿಪ್ರಾಯದ ಮೇರೆಗೆ ಕಾರ್ಯಪ್ರವೃತ್ತವಾಗಬೇಕಿದೆ ಎಂದು ಬಾಸಿಟ್ ಹೇಳಿದರು.
ಪಾಕಿಸ್ತಾನದ ಐಎಸ್ಐ ನಿರ್ದೇಶನದಂತೆ ಲಷ್ಕರ್ ಇ ತೊಯ್ಬಾ ಉಗ್ರಗಾಮಿ ಸಂಘಟನೆ ಮುಂಬೈ ಭಯೋತ್ಪಾದನಾ ದಾಳಿ ನಡೆಸಿರುವುದಾಗಿ ಭಾರತದ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್ಐಎ)ಯ ವಿಚಾರಣೆ ವೇಳೆ ಡೇವಿಡ್ ಹೆಡ್ಲಿ ಬಾಯ್ಬಿಟ್ಟಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿತ್ತು.
ಅಲ್ಲದೇ ಪಾಕಿಸ್ತಾನದ ಸಾಜಿದ್ ಮಿರ್, ಅಬ್ದುರ್ ರೆಹಮಾನ್ ಸೈಯದ್ ಹಾಗೂ ಪಾಕಿಸ್ತಾನದ ಆರ್ಮಿ ಇಂಟಲಿಜೆನ್ಸ್ ಏಜೆಂಟ್ಸ್ ಮೇಜರ್ ಇಕ್ಬಾಲ್, ಸಮೀರ್ ಅಲಿ ಭಾಗಿ ಎಂದೂ ಹೇಳಿದ್ದ. ಆದರೆ ಇದೀಗ ಪಾಕಿಸ್ತಾನ ಹೆಡ್ಲಿಯ ಹೇಳಿಕೆಯನ್ನು ಅಲ್ಲಗಳೆಯುವ ಮೂಲಕ ತನ್ನ ಇಬ್ಬಗೆಯ ತಂತ್ರಗಾರಿಕೆಯನ್ನು ಮುಂದುವರಿಸಿದೆ.
ಮುಂಬೈ ದಾಳಿಯ ಸಂಚು ರೂಪಿಸಿದವರಲ್ಲಿ ಲಷ್ಕರ್ ಇ ತೊಯ್ಬಾ ಪ್ರಮುಖ ಪಾತ್ರ ವಹಿಸಿತ್ತು ಎಂದಿರುವ ಹೆಡ್ಲಿ, ಅದೇ ರೀತಿ ಅಲ್ ಖಾಯಿದಾ ಪ್ರಮುಖ ಕಮಾಂಡರ್ ಮೊಹಮ್ಮದ್ ಇಲ್ಯಾಸ್ ಕಾಶ್ಮೀರಿ ಕೂಡ ದಾಳಿಯ ಹಿಂದಿರುವುದಾಗಿ ತಿಳಿಸಿದ್ದಾನೆ.