ಕಿರ್ಗಿಸ್ತಾನ್: ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ 49 ಬಲಿ
ಬಿಷಾಕೆಕ್, ಶನಿವಾರ, 12 ಜೂನ್ 2010( 18:38 IST )
ದಕ್ಷಿಣ ಕಿರ್ಗಿಸ್ತಾನದಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದಲ್ಲಿ 49 ಜನರು ಸಾವನ್ನಪ್ಪಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಶನಿವಾರ ಅಧಿಕಾರಿಗಳು ತಿಳಿಸಿದ್ದು, ಪರಿಸ್ಥಿತಿ ಇನ್ನೂ ಉದ್ವಿಗ್ನ ಸ್ಥಿತಿಯಲ್ಲಿರುವುದಾಗಿ ಹೇಳಿದ್ದಾರೆ.
ದೇಶದ ದೊಡ್ಡ ನಗರವಾದ ಓಶ್‌ನಲ್ಲಿ ಕಿರ್ಗಿಸ್ತಾನಿಯರು ಮತ್ತು ಉಜ್ಬೇಕ್ ಜನಾಂಗದವರ ನಡುವೆ ಗುರುವಾರ ರಾತ್ರಿ ಹೊತ್ತಿಕೊಂಡ ಹಿಂಸಾಚಾರದ ಕಿಡಿ ಸಾಕಷ್ಟು ಸಾವು-ನೋವುಗಳಿಗೆ ಕಾರಣವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಓಶ್‌ನಲ್ಲಿನ ಪರಿಸ್ಥಿತಿ ಮಾತ್ರ ಇನ್ನೂ ಉದ್ವಿಗ್ನವಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ.
ಹಿಂಸಾಚಾರವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನಾವು ಎರಡೂ ಕೋಮುಗಳ ಮುಖಂಡರ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದೇವೆ. ಅದಕ್ಕೂ ಮೊದಲು ಇವರು ಹಿಂಸಾಚಾರವನ್ನು ನಿಲ್ಲಿಸಬೇಕು ಎಂದು ಇಂಟರಿಮ್ ಮುಖಂಡ ರೋಜಾ ಓಟುನಾಬಾಯೆವಾ ತಿಳಿಸಿದ್ದಾರೆ.
ದೇಶದೊಳಗೆ ಆಂತರಿಕವಾಗಿ ಭುಗಿಲೆದ್ದಿರುವ ಜನಾಂಗೀಯ ಹಿಂಸಾಚಾರವನ್ನು ತಡೆಗಟ್ಟುವ ಬಗ್ಗೆ ಕಿರ್ಗಿಸ್ತಾನ್ ಆಂತರಿಕ ಸರ್ಕಾರ ಹೆಚ್ಚಿನ ನಿಗಾ ವಹಿಸಬೇಕೆಂದು ವಿಶ್ವಸಂಸ್ಥೆ ಮನವಿ ಮಾಡಿಕೊಂಡಿದೆ.