ಚೀನಾದಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಸುಮಾರು 155 ಮಂದಿ ಬಲಿಯಾಗಿದ್ದಾರೆ. ಅಲ್ಲದೇ ಹಲವು ಪ್ರದೇಶದಲ್ಲಿ ನೀರಿನ ಮಟ್ಟ ಏರಿದ ಹಿನ್ನೆಲೆಯಲ್ಲಿ 1 ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮಳೆ ಹಾಗೂ ಪ್ರವಾಹದಿಂದಾಗಿ ಅಂದಾಜು 6.5 ಬಿಲಿಯನ್ ಡಾಲರ್‌ನಷ್ಟು ನಷ್ಟ ಉಂಟಾಗಿರುವುದಾಗಿ ಚೀನಾದ ಪ್ರವಾಹ ನಿಯಂತ್ರಣ ಮತ್ತು ಬರ ಪರಿಹಾರ ಕಚೇರಿ ಮೂಲಗಳು ಹೇಳಿವೆ.
ಕಳೆದ ಒಂದು ದಶಕದಲ್ಲಿ ಇಂತಹ ಭಾರೀ ಪ್ರಮಾಣದ ಪ್ರವಾಹ ಎದುರಿಸಿಲ್ಲವಾಗಿತ್ತು ಎಂದು ತಿಳಿಸಿರುವ ಅಧಿಕಾರಿಗಳು, ದೇಶದ ಪ್ರಮುಖ ನದಿಗಳು ತುಂಬಿ ಹರಿಯುತ್ತಿರುವುದಾಗಿ ವಿವರಿಸಿದ್ದಾರೆ. 1998ರಲ್ಲಿ ಯಾಂಗ್ಟಾಜೆ ನದಿ ಉಕ್ಕಿ ಹರಿದ ಪರಿಣಾಮ ಉಂಟಾದ ಪ್ರವಾಹದಲ್ಲಿ ನಾಲ್ಕು ಸಾವಿರ ಮಂದಿ ಸಾವನ್ನಪ್ಪಿದ್ದರು.
ಪ್ರವಾಹದಿಂದಾಗಿ 140,000 ಮನೆಗಳು ಧ್ವಂಸವಾಗಿದ್ದು, 1.3 ಮಿಲಿಯನ್ ಜನರನ್ನು ತಾತ್ಕಾಲಿಕ ಶೆಡ್‌ಗಳಿಗೆ ಸ್ಥಳಾಂತರಿಸಲಾಗಿದೆ. ಪ್ರತಿ ಮಳೆಗಾಲದಲ್ಲಿ ಯಾಂಗ್ಟಾಜೆ ನದಿ ತುಂಬಿ ಹರಿದು ಪ್ರವಾಹ ಎದುರಿಸುವಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.