ಪಾಪ್ ಸಂಗೀತ ಲೋಕದ ದಂತಕಥೆಯಾಗಿದ್ದ ಮೈಕೆಲ್ ಜಾಕ್ಸನ್ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದರೆ ಆತ ಬದುಕುಳಿಯುತ್ತಿದ್ದ. ಆದರೆ ಆತನ ತಾಯಿ ಕ್ಯಾಥರಿನ್ ನಿರ್ಲಕ್ಷ್ಯದಿಂದಾಗಿಯೇ ಸಾವನ್ನಪ್ಪುವಂತಾಯಿತು ಎಂದು ಮೈಕೆಲ್ ತಂದೆ ಜೊಯ್ ತಮ್ಮ ಪತ್ನಿಯ ವಿರುದ್ಧವೇ ಆರೋಪಿಸಿದ್ದಾರೆ.
ಪಾಪ್ ಸಂಗೀತಲೋಕದ ಧ್ರುವತಾರೆಯಾಗಿದ್ದ ಮೈಕೆಲ್ ಜಾಕ್ಸನ್ ಸಾವಿನ ನಂತರ ಇದೀಗ ಆತನ ತಂದೆ ಧ್ವನಿ ಎತ್ತಿದ್ದಾರೆ. ಆತನ ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ಪರಿ, ಪರಿಯಾಗಿ ಬೇಡಿಕೊಂಡಿದ್ದೆ, ಅಲ್ಲದೇ ಆತನ ವೈಯಕ್ತಿಕ ವಿಷಯದ ಬಗ್ಗೆ ಸಹಾಯ ಮಾಡುವಂತೆ ನಾನು ಕೇಳಿಕೊಂಡಿದ್ದರೂ ಸಹ ಕ್ಯಾಥರಿನ್ ಬೇಜವಾಬ್ದಾರಿಯಿಂದ ವರ್ತಿಸಿರುವುದಾಗಿ ಜಾಯ್ ದೂರಿದ್ದಾರೆ.
ಆದರೆ ನನ್ನ ಬೇಡಿಕೆಯನ್ನು ಆಕೆ ತಿರಸ್ಕರಿಸಿದ್ದಳು. ಒಂದು ವೇಳೆ ಆತನ ಬಗ್ಗೆ ಕಾಳಜಿ ವಹಿಸಿದ್ದರೆ ಮೈಕೆಲ್ ಈಗಲೂ ಜೀವಂತವಾಗಿರುತ್ತಿದ್ದ ಎಂದು ನ್ಯೂಸ್‌ಆಫ್ ದಿ ವರ್ಲ್ಡ್ ವರದಿ ತಿಳಿಸಿದೆ.
ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಮೈಕೆಲ್ ತೀರಿಕೊಂಡ ಸಂದರ್ಭದಲ್ಲಿ ಕ್ಯಾಥರೀನ್ ನಿಯಂತ್ರಣಕ್ಕೆ ಬಾರದಷ್ಟು ಅತ್ತಿದ್ದಳು, ಮತ್ತು ತುಂಬಾ ವಿಚಲಿತಳಾಗಿದ್ದಳು. ಆದರೆ ಏನು ಮಾಡಲು ಸಾಧ್ಯ, ಆ ಸಂದರ್ಭದಲ್ಲಿ ಮೈಕೆಲ್‌ನ ಬಗ್ಗೆ ತಾಯಿಯಾದವಳು ನಿಗಾ ವಹಿಸಿದ್ದರೆ ಆತ ಬದುಕುಳಿಯುತ್ತಿದ್ದ ಎಂದು ಜಾಯ್ ಸಂದರ್ಶನದಲ್ಲಿ ತಮ್ಮ ಅಳಲು ತೋಡಿಕೊಂಡಿರುವುದಾಗಿ ವರದಿ ವಿವರಿಸಿದೆ.