ಸುಮಾರು ಏಳು ಕೋಟಿ ರೂಪಾಯಿ ವೆಚ್ಚದ ವಿಶ್ವದ ಬೃಹತ್ ಶಿವನ ವಿಗ್ರಹವನ್ನು ನೇಪಾಳ ಅಧ್ಯಕ್ಷ ರಾಮ್ ಬರನ್ ಯಾದವ್ ಜೂನ್ 21 ರಂದು ಉದ್ಘಾಟನೆ ಮಾಡಲಿದ್ದಾರೆ.
ಕಾಠ್ಮಂಡುವಿನಿಂದ 20ಕಿ.ಮೀ.ದೂರದಲ್ಲಿ ಸುಮಾರು 400,000 ಚದರ ಅಡಿ ಪ್ರದೇಶದಲ್ಲಿ 143 ಅಡಿ ಎತ್ತರದ ಕೈಲಾಸನಾಥ್ ಮಹಾದೇವನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಈ ಪ್ರದೇಶದಲ್ಲಿ ಮನೆಗಳು, 16 ಡಿಲಕ್ಸ್ ರೂಮ್ ರೆಸಾರ್ಟ್, ಯೋಗ, ಆರೋಗ್ಯಧಾಮ ಮತ್ತು ಧ್ಯಾನಕೇಂದ್ರಗಳನ್ನು ಹೊಂದಿದೆ.
ಅಲ್ಲದೇ ಬೃಹತ್ ಶಿವಮೂರ್ತಿ ಇರುವ ಸ್ಥಳದಲ್ಲಿ ಮಕ್ಕಳ ಪಾರ್ಕ್, ಪಿಸಿಯೋಥೆರಪಿ, ಸೂರ್ಯಸ್ನಾನ ವ್ಯವಸ್ಥೆ ಕೂಡ ಮಾಡಲಾಗಿದೆ. ಕಬ್ಬಿಣದ ಸರಳು, ಕಾಂಕ್ರೀಟ್, ಸಿಮೆಂಟ್ ಬಳಸಿ ತಾಮ್ರದ ಬಣ್ಣದ ಶಿವನ ಮೂರ್ತಿಯನ್ನು ನಿರ್ಮಿಸಲಾಗಿದೆ. ಕುತ್ತಿಗೆಯಲ್ಲಿ ನಾಗರಹಾವು ಹಾಗೂ ಕೈಯಲ್ಲಿ ತ್ರಿಶೂಲ ಹಿಡಿದು ಕುಳಿತಿರುವ ಭಂಗಿಯಲ್ಲಿ ವಿಗ್ರಹ ಸ್ಥಾಪಿಸಲಾಗಿದೆ.
ಜೂನ್ 21ರಂದು ಬೃಹತ್ ಶಿವನ ವಿಗ್ರಹದ ಉದ್ಘಾಟನೆ ನಡೆಯಲಿದ್ದು, ಸಮಾರಂಭದಲ್ಲಿ ಬದ್ರಿನಾಥ್ ಶಂಕರಾಚಾರ್ಯ ಆಶ್ರಮದ ಸ್ವಾಮಿ ಮಾಧವ್ ಮಹಾರಾಜ್ ಅವರು ಕೂಡ ಪಾಲ್ಗೊಳ್ಳಲಿದ್ದಾರೆ. ನೇಪಾಳದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ನೇಪಾಳ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.