ಬಲೂಚಿಸ್ತಾನ್: ಕುಡಿದು ಗಲಾಟೆ ಮಾಡಿ ಪದವಿ ಕಳೆದುಕೊಂಡ ಸಚಿವ!
ಕ್ವೆಟ್ಟಾ, ಸೋಮವಾರ, 14 ಜೂನ್ 2010( 15:50 IST )
ಸಿನಿಮಾ ಮಂದಿರದೊಳಗೆ ಕುಡಿದು ಗಲಾಟೆ ಮಾಡಿದ ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಬಲೂಚಿಸ್ತಾನದ ಸಚಿವರೊಬ್ಬರನ್ನು ಸಚಿವಸ್ಥಾನದಿಂದ ವಜಾಗೊಳಿಸಿರುವುದಾಗಿ ಬಲೂಚಿಸ್ತಾನ ಮುಖ್ಯಮಂತ್ರಿಗಳ ವಕ್ತಾರ ತಿಳಿಸಿದ್ದಾರೆ.
ಲಾಹೋರ್‌ನ ಸಿನಿಮಾ ಮಂದಿರದೊಳಗೆ ಕುಡಿದು ಗಲಾಟೆ ಮಾಡಿದ ಸಚಿವ ಜಾಫರ್ ಜಾರ್ಜ್ ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಜಾರ್ಜ್ ಜಾಮೀನ ಮೇಲೆ ಹೊರಬಂದಿದ್ದ. ಆದರೆ ಆರೋಪಿತ ಸಚಿವನನ್ನು ಮುಖ್ಯಮಂತ್ರಿಗಳು ಸ್ಥಾನದಿಂದ ವಜಾಗೊಳಿಸಿದ್ದಾರೆಂದು ಮಾಧ್ಯಮದ ವರದಿ ಹೇಳಿದೆ.
ಸೆಂಟ್ರಲ್ ಪಂಜಾಬ್ ಪ್ರಾಂತ್ಯದ ಲಾಹೋರ್ ನಗರ ಐಶಾರಾಮಿ ಜೀವನಕ್ಕೆ ಹೇಳಿಸಿದ ನಗರವಾಗಿದ್ದು, ಇಲ್ಲಿ ಸಿನಿಮಾ, ಸಂಗೀತ, ನಾಟಕ ಎಲ್ಲವೂ ಜನರ ಆಕರ್ಷಣೆಯ ಕೇಂದ್ರಬಿಂದು. ಹಾಗಾಗಿ ಲಾಹೋರ್ ಸಿನಿಮಾ ಮಂದಿರದಲ್ಲಿ ಕುಡಿದು ಚಿತ್ತಾದ ಸಚಿವ ಮಹಾಶಯರು ಕಾದಾಟಕ್ಕೆ ಇಳಿದಿದ್ದರು. ಆದರೆ ಈ ದೃಶ್ಯಗಳನ್ನು ಖಾಸಗಿ ಟಿವಿ ಚಾನೆಲ್ ಪ್ರಸಾರ ಮಾಡುವ ಮೂಲಕ ಪ್ರಕರಣ ಮತ್ತಷ್ಟು ಜಟಿಲವಾಗಿತ್ತು.
ಭಾನುವಾರ ರಾತ್ರಿ ಜಾಫರ್‌ನನ್ನು ಲಾಹೋರ್ ಪೊಲೀಸರು ಬಂಧಿಸಿದಾಗ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಕ್ಷದ ಸದಸ್ಯರು ಪೊಲೀಸ್ ಅಧಿಕಾರಿಗಳೊಂದಿಗೆ ಜಗಳಕ್ಕೆ ನಿಂತ ದೃಶ್ಯವನ್ನೂ ಚಾನೆಲ್ ಪ್ರಸಾರ ಮಾಡಿತ್ತು.
ಸಚಿವ ಜಾಫರ್ ಜಾರ್ಜ್ ಕುಡಿತದ ಪ್ರಕರಣದ ಕುರಿತು ಪಂಜಾಬ್ ಸರ್ಕಾರ ನೀಡಿದ ವರದಿಯಂತೆ ಬಲೂಚಿಸ್ತಾನ್ ಪ್ರಾಂತ್ಯ ಸರ್ಕಾರದ ಮುಖ್ಯಮಂತ್ರಿ ನವಾಬ್ ಮುಹಮ್ಮದ್ ಅಸ್ಲಾಮ್ ರೈಸಾನಿ ಅವರು ಸಚಿವ ಪದವಿಯಿಂದ ತೆಗೆದು ಹಾಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.