ಕೇಂದ್ರ ಅಸ್ಸಾಮಿನ ಅಂಗ್ಲಾಂಗ್ ಜಿಲ್ಲೆಯ ಕರ್ಬಿ ಎಂಬಲ್ಲಿ ರೈಲ್ವೇ ಹಳಿಯಲ್ಲಿ ಶಕ್ತಿಶಾಲಿ ಬಾಂಬು ಸ್ಫೋಟಗೊಂಡ ಘಟನೆ ಗುರುವಾರ ನಸುಕಿಗೂ ಮುಂಚಿನ ಅವಧಿಯಲ್ಲಿ ಸಂಭವಿಸಿದೆ. ಬಾಂಬನ್ನು ದೆಲ್ಲಿ-ದಿಬ್ರುಗರ್ ರಾಜಧಾನಿ ಎಕ್ಸ್‌ಪ್ರೆಸ್ ರೈಲನ್ನು ಗುರಿಯಾಗಿ ಈ ಬಾಂಬ್ ಇರಿಸಲಾಗಿತ್ತು. ಅದೃಷ್ಟವಶಾತ್ ಸ್ಫೋಟದಿಂದ ಯಾರಿಗೂ ಹಾನಿಯಾಗಲಿಲ್ಲ.
ಪಟ್ಟಣದಿಂದ ಐದು ಕಿ.ಮೀ ದೂರದಲ್ಲಿ ಮಧ್ಯರಾತ್ರಿ 1.10ರ ವೇಳೆಗೆ ಬಾಂಬ್ ಸ್ಫೋಟಗೊಂಡಿದೆ. ಹಳಿ ಪರೀಕ್ಷೆಯ ಭದ್ರತಾ ಎಸ್ಕಾರ್ಟ್ ಎಂಜಿನ್ ಈ ಪ್ರದೇಶವನ್ನು ದಾಟಿದ ತಕ್ಷಣ ಬಾಂಬ್ ಸ್ಫೋಟಗೊಂಡಿದೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲು ಆಗಮನಕ್ಕೆ ಮುಂಚಿವಾಗಿ ಈ ಭದ್ರತಾ ಪರೀಕ್ಷೆ ಮಾಡಲಾಗಿತ್ತು. ಸ್ಫೋಟದ ವೇಳೆ ಹಳಿಯಲ್ಲಿ ಎರಡೂವರೆ ಅಡಿ ಆಳದ ಗುಳಿ ಬಿದ್ದಿದೆ.
ಡಿಎಸ್‌ಪಿ ಕೆ.ಕೆ. ಶರ್ಮಾ ಮತ್ತು ರಾಜ್‌ಪುಟಾಣ ರೈಫಲ್ಸ್‌ನ ಹಿರಿಯ ಅಧಿಕಾರಿಗಳು ಸ್ಫೋಟ ಸ್ಥಳಕ್ಕೆ ಧಾವಿಸಿದ್ದು, ಹಳಿಯಲ್ಲಿ ಇನ್ನೊಂದು ಶಕ್ತಿಶಾಲಿ ಸ್ಫೋಟಕ (ಐಇಡಿ) ಪತ್ತೆಮಾಡಿದ್ದಾರೆ. ಈ ಸಜೀವ ಐಇಡಿಯನ್ನು ಸುರಕ್ಷಿತವಾಗಿ ನಿಷ್ಕ್ರೀಯಗೊಳಿಸಲಾಗಿದೆ.
ಈ ಕೃತ್ಯವನ್ನು ಕಬ್ರಿ ಲೊಂಗ್ರಿ ನ್ಯಾಶನಲ್ ಲಿಬರೇಶನ್ ಫ್ರಂಟ್(ಕೆಎನ್ಎಲ್ಎಫ್) ನಡೆಸಿರುವುದಾಗಿ ಶಂಕಿಸಲಾಗಿದೆ. ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆಯು ಐದಂಶದ ಸನ್ನದನ್ನು ಸಲ್ಲಿಸಿದ್ದು, ತಮ್ಮ ನಿಲುವೇನು ಸ್ಪಷ್ಟಪಡಿಸಲು ರಾಜಕೀಯ ಪಕ್ಷಗಳಿಗೆ ಸೂಚಿಸಿದೆ.
|