ಕಳೆದ ವರ್ಷ ಕ್ರೈಸ್ತವಿರೋಧಿ ಗಲಭೆಗಳ ಸಂಬಂಧ ಬಂಧನಕ್ಕೀಡಾಗಿದ್ದ ಸ್ಥಳೀಯ ಆರೆಸ್ಸೆಸ್ ನಾಯಕನೊಬ್ಬನನ್ನು ಶಂಕಿತ ಮಾವೋವಾದಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಕೋಮು ಸೂಕ್ಷ್ಮ ಕಂಧಮಲ್ ಜಿಲ್ಲೆಯಲ್ಲಿ ಗುರುವಾರ ನಸುಕಿನಲ್ಲಿ ಸಂಭವಿಸಿದೆ.
ಇಲ್ಲಿಂದ 145 ಕಿಲೋ ಮೀಟರ್ ದೂರದಲ್ಲಿರುವ ರುದಿಗುಮ ಗ್ರಾಮದಲ್ಲಿ ಸುಮಾರು 15 ಶಸ್ತ್ರಸಜ್ಜಿತ ಬಂಡುಕೋರರು ಪ್ರಭಾತ್ ಪಾಣಿಗ್ರಾಹಿ ಎಂಬಾತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಮೃತ ಪಾಣಿಗ್ರಾಹಿ ಆರೆಸ್ಸೆಸ್ ಭವನದಲ್ಲಿ ತಂಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗಾರರ ಪತ್ತೆಗೆ ಭಾರೀ ಕೂಂಬಿಂಗ್ ಕಾರ್ಯ ಆರಂಭಿಸಲಾಗಿದೆ. ಯುವುದೇ ಅನಾಹುತಕಾರಿ ಘಟನೆಗಳು ನಡೆಯದಂತೆ ತಡೆಯಲು ಹೆಚ್ಚುವರಿ ಪಡೆಗಳನ್ನು ಗ್ರಾಮದ ಸುತ್ತ ನಿಯೋಜಿಸಲಾಗಿದೆ.
ಕಂಧಮಲ್‌ನಲ್ಲಿ ವಿಹಿಂಪ ನಾಯಕ ಲಕ್ಷ್ಮಣಾನಂದ ಸರಸ್ವತಿ ಸ್ವಾಮೀಜಿ ಹತ್ಯೆಯ ಬಳಿಕ ಸಂಭವಿಸಿದ ಕೋಮುಗಲಭೆಯಲ್ಲಿ ಪಾಲ್ಗೊಂಡಿರುವ ಆಪಾದನೆಯಲ್ಲಿ ಬಂಧನಕ್ಕೀಡಾಗಿದ್ದ ಪಾಣಿಗ್ರಾಹಿ ಅವರನ್ನು ಬಲಿಗುಡ ಜೈಲಿನಿಂದ ಮಾರ್ಚ್ 14ರಂದು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು. |