ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರವನ್ನು ನಿಗ್ರಹಿಸುವ ಕುರಿತು ಸರ್ಕಾರ ಮತ್ತು ನ್ಯಾಯಾಂಗ ಎರಡೂ ಸೇರಿ ಚರ್ಚಿಸಬೇಕು ಎಂದಿರುವ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ನ್ಯಾಯಮೂರ್ತಿಗಳ ಆಸ್ತಿ ಬಹಿರಂಗ ನಿಯಮದ ಬಗ್ಗೆ ನ್ಯಾಯಾಂಗವೇ ಮೊದಲು ಚಿಂತಿಸಬೇಕು ಎಂದು ಹೇಳಿದ್ದಾರೆ. ಇದು ಜಾಗರಿಯಾಗುವ ಅಗತ್ಯವಿದ್ದು ನ್ಯಾಯಾಂಗದ ಕಡೆಯಿಂದಲೂ ಇದಕ್ಕೆ ವಿರೋಧವಿಲ್ಲ ಎಂದು ಅವರು ಅಭ್ರಿಪ್ರಾಯಿಸಿದ್ದಾರೆ.ಸಂವಿಧಾನಾತ್ಮಕ ಅಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ಸಮಾಜಕ್ಕೆ ಉತ್ತರದಾಯಿಯಾಗಿರಬೇಕು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ಆಸ್ತಿಬಹಿರಂಗವೂ ಅಪೇಕ್ಷಣೀಯ. ಆದರೆ ವಿಶ್ವದಲ್ಲೇ ವಿಶ್ವಾಸಾರ್ಹ ನ್ಯಾಯಾಂಗ ವ್ಯವಸ್ಥೆ ನಮ್ಮದಾಗಿದ್ದು, ನ್ಯಾಯಾಂಗದೊಂದಿಗೆ ಸಂಘರ್ಷಕ್ಕಿಳಿಯಲು ತಾನು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ನ್ಯಾಯಾಂಗ ಸುಧಾರಣೆ ಆಗಬೇಕಿದ್ದರೆ, ನ್ಯಾಯಾಂಗ ಮತ್ತು ಆಡಳಿತದ ನಡುವೆ ಸಾಮರಸ್ಯವಿರಬೇಕು. ಇಲ್ಲದಿದ್ದರೆ, ಅನಗತ್ಯ ಸಂಘರ್ಷದಲ್ಲೇ ಸಮಯ ಶಕ್ತಿ ಪೋಲಾಗುತ್ತದೆ. ಆಡಳಿತ ಸುಧಾರಣೆ ಮತ್ತು ನ್ಯಾಯಾಂಗ ಸುಧಾರಣೆ ಜತೆಜತೆಗೆ ನಡೆಯಬೇಕಿರುವ ಪ್ರಕ್ರಿಯೆಗಳು ಎಂದು ಮೊಯ್ಲಿ ಹೇಳಿದರು. |