ಕೋಮುದಳ್ಳುರಿಯಿಂದ ತತ್ತರಿಸಿ ಹೋಗಿದ್ದ ಒರಿಸ್ಸಾದ ಕಂಧಮಾಲ್‌ನಲ್ಲಿ ಇದೀಗ ಮತ್ತೆ ಬೆದರಿಕೆಯ ಭಿತ್ತಿಪತ್ರ ಮತ್ತೊಂದು ಹೊಸ ಉದ್ವಿಗ್ನ ವಾತಾವರಣವೊಂದನ್ನು ಸೃಷ್ಟಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನೂತನವಾಗಿ ಆಯ್ಕೆಯಾಗಿ ಜೈಲು ಕಂಬಿ ಎಣಿಸುತ್ತಿರುವ ಭಾರತೀಯ ಜನತಾ ಪಕ್ಷದ ಶಾಸಕ ಮನೋಜ್ ಪ್ರಧಾನ್ ಅವರನ್ನು ವಜಾಗೊಳಿಸಬೇಕೆಂಬ ಭಿತ್ತಿಪತ್ರ ಕಂಧಮಾಲ್ ಪ್ರದೇಶದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ರಾಯ್‌ಕಿಯಾ ಪ್ರದೇಶದಿಂದ ನಾವು ಬೆದರಿಕೆಯ ಭಿತ್ತಿಪತ್ರವನ್ನು ವಶಪಡಿಸಿಕೊಂಡಿದ್ದು, ಆ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿರುವುದಾಗಿ ಕಂಧಮಾಲ್ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಕುಮಾರ್ ವಿವರಿಸಿದ್ದಾರೆ. ಶಾಸಕ ಮನೋಜ್ ಪ್ರಧಾನ್ ಹಾಗೂ ಬಜರಂಗದಳದ ಕೆಲವು ಸದಸ್ಯರನ್ನು ಕಿತ್ತೊಗೆಯಬೇಕೆಂಬ ಬೆದರಿಕೆಯ ಎರಡು ಭಿತ್ತಿಪತ್ರ ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಿದರು.
2008ರ ಅಕ್ಟೋಬರ್‌ನಲ್ಲಿ ನಡೆದ ಕೋಮು ಹಿಂಸಾಚಾರ, ಕೊಲೆ ಹಾಗೂ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ್ ವಿರುದ್ಧ ದೂರು ದಾಖಲಾಗಿದ್ದು, ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ.
ಈ ಬೆದರಿಕೆಯ ಭಿತ್ತಿಪತ್ರದ ಹಿಂದೆ ಮಾವೋವಾದಿಗಳ ಕೈವಾಡ ಇರಬೇಕೆಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ, ಈ ಬಗ್ಗೆ ತನಿಖೆ ನಡೆಸಿ ಖಚಿತಪಡಿಸುವುದಾಗಿ ಅವರು ಹೇಳಿದರು.
2008ರ ಆಗೋಸ್ಟ್ 23ರಂದು ವಿಶ್ವ ಹಿಂದೂ ಪರಿಷತ್ ಮುಖಂಡ ಲಕ್ಷ್ಮಣಾನಂದ ಸರಸ್ವತಿ ಸ್ವಾಮಿಯನ್ನು ಹತ್ಯೆಗೈದ ಬಳಿಕ ಇಡೀ ಕಂಧಮಾಲ್ ಜನಾಂಗೀಯ ದಳ್ಳುರಿಯಿಂದ ಹೊತ್ತಿ ಉರಿಯುವ ಮೂಲಕ ಹಲವು ಮಂದಿ ಮನೆ-ಮಠ ಕಳೆದುಕೊಂಡಿದ್ದಲ್ಲದೆ, ಅನೇಕ ಸಾವು-ನೋವುಗಳು ಸಂಭವಿಸಿದ್ದವು. |