ಸಾಕಷ್ಟು ಗದ್ದಲ, ಗೊಂದಲಗಳ ನಡುವೆ ಮಹಾರಾಷ್ಟ್ರ ಸರ್ಕಾರವು ಮುಂಬೈದಾಳಿಗೆ ಸಂಬಂಧಿಸಿದ ರಾಮ್ ಪ್ರಧಾನ್ ಸಮಿಯ ವರದಿಗೆ ಸರ್ಕಾರವು ಕೈಗೊಂಡಿರುವ ಕ್ರಮದ(ಆಕ್ಷನ್ ಟೇಕನ್ ರಿಪೋರ್ಟ್) ಕುರಿತ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಸಮಿತಿಯ ವರದಿಯನ್ನೂ ಸಲ್ಲಿಸಬೇಕು ಎಂಬುದಾಗಿ ವಿರೋಧ ಪಕ್ಷಗಳು ತೀವ್ರ ಗದ್ದಲವೆಬ್ಬಿಸಿದ್ದು, ಸದನವು ಗೊಂದಲದ ಗೂಡಾಗಿತ್ತು.
ವರದಿಯನ್ನು ಮಂಡಿಸಿದ ಗೃಹಸಚಿವ ಜಯಂತ್ ಪಾಟೀಲ್ ಅವರು "ಪ್ರಧಾನ್ ವರದಿಯಲ್ಲಿ ಕೆಲವು ರಹಸ್ಯ ವಿಚಾರಗಳು ಇದ್ದು ಇವುಗಳು ಮುಂಬೈ ಮತ್ತು ಮಹಾರಾಷ್ಟ್ರದ ಭದ್ರತೆಯ ದೃಷ್ಟಿಯಲ್ಲಿ ಅತಿಮುಖ್ಯವಾಗಿರುವ ಕಾರಣ ಉದ್ದೇಶಪೂರ್ವಕವಾಗಿ ಈ ವರದಿಯನ್ನು ಮಂಡಿಸಲಿಲ್ಲ" ಎಂದು ಸಮಜಾಯಿಷಿ ನೀಡಿದರು.
ಎಟಿಆರ್ ಕುರಿತು ಪೂರ್ಣಪ್ರಮಾಣದ ಚರ್ಚೆಗೆ ಸಿದ್ಧ ಎಂಬುದಾಗಿ ಹೇಳಿದ ಸಚಿವರು ಈ ವಿಚಾರದಲ್ಲಿ ಯಾರೂ ರಾಜಕೀಯ ಬೆರೆಸಬಾರದು, ವರದಿಯಲ್ಲಿ ಕೆಲವು ಸೂಕ್ಷ್ಮ ವಿಚಾರಗಳಿವೆ ಎಂದವರು ಹೇಳಿದರು. ಆದರೆ ಬಿಜೆಪಿ-ಶಿವಸೇನಾ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಲೇ ಇದ್ದರು.
ಮುಂಬೈದಾಳಿ ಕುರಿತು ವಿಚಾರಣೆಗಳು ನಡೆಯುತ್ತಿರುವ ಕಾರಣ ಕೆಲವು ವಿಚಾರಗಳನ್ನು ಬಹಿರಂಗ ಪಡಿಸುವುದು ಸೂಕ್ತವಲ್ಲ ಎಂದು ಜಯಂತ್ ಪಾಟೀಲ್ ನುಡಿದರು |