ಮುಂಬೈ: ಮಂಗಳವಾರ ರಾತ್ರಿಯಿಂದ ಮುಂಬೈ ನಗರಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮುಂಬೈಗರ ಜನಜೀವನ ಅಸ್ತವ್ಯಸ್ತವಾಗಿದೆ. ಹಲವಾರು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ನಾಗರಿಕರು ಓಡಾಡಲು ಪರದಾಡುವ ಪರಿಸ್ಥಿತಿಯುಂಟಾಗಿದೆ.
ದಾದರ್, ಹಿಂದ್‌ಮಾತಾ, ಚೆಂಬೂರ್, ಪರೇಲ್ ಮತ್ತು ಸಿಯಾನ್ ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಪ್ರಮುಖ ರಸ್ತೆಗಳು ಸೇರಿದಂತೆ ಅನೇಕ ಕಡೆಗಳಲ್ಲಿ ನೀರುನಿಂತಿದ್ದು, ಪರಿಸ್ಥಿತಿ ಹದಗೆಟ್ಟಿದೆ.
ಕೆಲವೆಡೆ ಸ್ಥಳೀಯ ರೈಲುಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಿದ್ದರೂ, ಪರಿಸ್ಥಿತಿ ನಿಯಂತ್ರಣ ತಪ್ಪಿಲ್ಲಎಂದು ವರದಿ ತಿಳಿಸಿದೆ. ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿದೆ. ಸೆಂಟ್ರಲೈನ್ ರೈಲುಗಳ ಮೇಲೆ ಹೆಚ್ಚು ಪರಿಣಾಮ ಬೀರಿದ್ದು, ದಿನನಿತ್ಯದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.
ಇದೇ ವೇಳೆ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಟಕ್ಕೆ ಆಂಶಿಕ ತೊಂದರೆ ಉಂಟಾಗಿದೆ. ರನ್‌ವೇ ವಿಸಿಬಿಲಿಟಿಯಲ್ಲಿ ಸಮಸ್ಯೆ ಉಂಟಾಗಿದೆ. ವಿಸಿಬಿಲಿಟಿಯು 1000 ಮೀಟರ್‌ಗಳಿಗೆ ಸುಧಾರಿಸಿದ ಬಳಿಕ ವಿಮಾನ ಹಾರಾಟ ಆರಂಭಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಇದೇವೇಳೆ, ಮುಂದಿನ ಎರಡುದಿನಗಳ ಕಾಲ ನಗರದ ಕೆಲವೆಡೆ ಇನ್ನಷ್ಟು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುಡುಗು ಸಿಡಿಲಿನಿಂದ ಕೂಡಿದ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂಬುದಾಗಿ ನಿರೀಕ್ಷಿಸಲಾಗಿದೆ. |