ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿರುದ್ಧ ಲೈಂಗಿಕ ಹಗರಣದ ಆರೋಪ ಹೊರಿಸಿರುವ ಪಿಡಿಪಿ ಶಾಸಕ ಮುಜಾಫರ್ ಹುಸೇನ್ ಬೇಗ್ ಅವರ ವಿರುದ್ಧ ನ್ಯಾಶನಲ್ ಕಾಂಗ್ರೆಸ್ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ದು, ಸ್ಪೀಕರ್ ಅವರು ಇದನ್ನು ಸ್ವೀಕರಿಸಿದ್ದಾರೆ.
ಮಂಗಳವಾರದಂದು ಬೇಗ್ ಮಾಡಿದ್ದ ಈ ಆರೋಪವು ಸದನದಲ್ಲಿ ನಾಟಕೀಯ ದೃಶ್ಯಗಳಿಗೆ ಹೇತುವಾಗಿತ್ತು. ಇದರಿಂದ ತೀವ್ರ ಭಾವಾವೇಶಕ್ಕೊಳಗಾಗಿದ್ದ ಒಮರ್ ಅಬ್ದುಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ರಾಜ್ಯಪಾಲ ಮೋತಿಲಾಲ್ ವೋರಾ ರಾಜೀನಾಮೆ ಸ್ವೀಕರಿಸಲು ನಿರಾಕರಿಸಿದ್ದಾರೆ.
ಒಮರ್ ಅವರು ಬುಧವಾರದ ಸದನದ ಕಲಾಪಗಳಲ್ಲಿ ಹಾಜರಿರಲಿಲ್ಲ.
ಮೂರು ವರ್ಷಗಳ ಹಿಂದಿನ ಕುಖ್ಯಾತ ಶ್ರೀನಗರ ಲೈಂಗಿಕ ಹಗರಣದಲ್ಲಿ ಒಮರ್ ಅಬ್ದುಲ್ಲಾ ಅವರೂ ಒಳಗೊಂಡಿದ್ದಾರೆ ಎಂದು ಆಪಾದಿಸಿದ್ದ ಬೇಗ್, ಒಮರ್ ಈ ರಾಜ್ಯದ ಮುಖ್ಯಮಂತ್ರಿಯಾಗಲು ನೈತಿಕ ಹಕ್ಕು ಹೊಂದಿಲ್ಲ, ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. ಮೂರು ವರ್ಷಗಳ ಹಿಂದಿನ ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಒಮರ್ ಪಾಲ್ಗೊಳ್ಳುವಿಕೆ ಕುರಿತು ಯಾವುದೇ ಪುರಾವೆ ಇಲ್ಲ ಎಂದು ಹೇಳಿತ್ತು.
ಈ ಹಗರಣದಲ್ಲಿ ಓಮರ್ ಅಬ್ದುಲ್ಲಾ, ಅವರ ತಂದೆ ಫಾರೂಕ್ ಅಬ್ದುಲ್ಲಾ ಸೇರಿದಂತೆ ಪ್ರಮುಖ ರಾಜಕಾರಣಿಗಳ ಹೆಸರು ಕೇಳಿಬಂದಿತ್ತು.