ಪಾಕಿಸ್ತಾನಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರನ್ನು ಈಜಿಪ್ಟಿನಲ್ಲಿ ಜುಲೈ 16ರಂದು ಭೇಟಿಯಾದ ವೇಳೆ ಪಾಕಿಸ್ತಾನವು ಬಲೂಚಿಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಕಡತ ನೀಡಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಸಂಸತ್ತಿಗೆ ಹೇಳಿದ್ದಾರೆ.
ಈಜಿಪ್ಟಿನಲ್ಲಿ ಪಾಕಿಸ್ತಾನಿ ಪ್ರಧಾನಿಯವರನ್ನು ಭೇಟಿಯಾದ ವೇಳೆ ನೀಡಲಾಗಿರುವ ಇಂಡೋ-ಪಾಕ್ ಜಂಟಿ ಹೇಳಿಕೆಯ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ಮಧ್ಯಪ್ರವೇಶಿಸಿದ ಅವರು ಅಂತಹ ಯಾವುದೇ ಮಾಹಿತಿ ಕಡತ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಭಾರತ-ಪಾಕ್ ನಡುವಿನ ಸಮಗ್ರ ಮಾತುಕತೆಯಲ್ಲಿ ಭಯೋತ್ಪಾದನೆಯ ಕುರಿತು ಪಾಕಿಸ್ತಾನದ ಕ್ರಮವನ್ನು ಹೊರಗಿರಿಸಿರುವ ವಿಚಾರದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದೆ.
ಚರ್ಚೆಯನ್ನು ಆರಂಭಿಸಿದ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿ ಈಜಿಪ್ಟಿನಲ್ಲಿ ಸರ್ಕಾರವು ಪಾಕಿಸ್ತಾನಕ್ಕೆ ಮಾರಲ್ಪಟ್ಟಿದ್ದು ಇದು ನಾಚಿಕೆಗೇಡಿನ ವಿಚಾರ ಎಂದು ನುಡಿದರು. ಸಮಗ್ರಮಾತುಕತೆಯಲ್ಲಿ ಭಯೋತ್ಪಾದನೆ ವಿಚಾರವನ್ನು ಹೊರಗಿರಿಸುವ ಮೂಲಕ ಸರ್ಕಾರವು ಬಹುದೊಡ್ಡ ಪ್ರಮಾದವೆಸಗಿದೆ ಎಂದು ಅವರು ದೂರಿದರು.
ಪ್ರಧಾನಿ ಅವರು ಈಜಿಪ್ಟಿನಲ್ಲಿ ಪಾಕಿಸ್ತಾನದ ಶಿಬಿರದೊಳಕ್ಕೆ ನಡೆದಿದ್ದಾರೆ ಎಂದು ಸಿನ್ಹಾ ಆರೋಪಿಸಿದರು. ಅಲ್ಲದೆ ಬಲೂಚಿಸ್ಥಾನದಲ್ಲಿ ಭಾರತದ ಕೈವಾಡದ ಕುರಿತು ಪಾಕಿಸ್ತಾನವು ಮಾಹಿತಿ ಕಡತ ನೀಡಿರುವಂತೆ ಪ್ರಧಾನಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರಧಾನಿ ಈ ಕುರಿತು ಯಾವುದೇ ಮಾಹಿತಿ ಕಡತ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅದಾಗ್ಯೂ ಪ್ರಧಾನಿ ಅವರು ಚರ್ಚೆಯ ಕೊನೆಯಲ್ಲಿ ಪಾಕಿಸ್ತಾನದೊಂದಿಗಿನ ಮಾತುಕತೆ, ಅಮೆರಿಕದೊಂದಿಗಿನ ಬಳಕೆದಾರ ಒಪ್ಪಂದ ಹಾಗೂ ಜಿ8 ಶೃಂಗ ಸಮ್ಮೇಳದ ಕುರಿತು ಮಾಹಿತಿ ನೀಡಲಿದ್ದಾರೆ.