ಈಶಾನ್ಯ ಮುಂಬೈನಲ್ಲಿ ಬೃಹತ್ ನೀರಿನ ಕೊಳವೆಯೊಂದು ಚಲಿಸುತ್ತಿದ್ದ ರೈಲೊಂದರ ಮೇಲೆ ಶುಕ್ರವಾರ ಬೆಳಿಗ್ಗೆ ಬಿದ್ದಿದ್ದರಿಂದ ಚಾಲಕ ಮತ್ತು ಪ್ರಯಾಣಿಕರೊಬ್ಬರು ಸತ್ತಿದ್ದು, ಇನ್ನೂ 12 ಜನರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಮುಲಂಡ್ ಮತ್ತು ಥಾನೆ ನಡುವೆ ನೀರಿನ ಕೊಳವೆಗೆ ಆಸರೆಯಾಗಿ ನಿರ್ಮಿಸಿದ ಸೇತುವೆ ಸಮೇತ ರೈಲಿನ ಮೇಲೆ ಬಿದ್ದಿತೆಂದು ಸೆಂಟ್ರಲ್ ರೈಲ್ವೆ ಮತ್ತು ಗ್ರೇಟರ್ ಮುಂಬೈ ನಗರಸಭೆ ಅಧಿಕಾರಿಗಳು ಹೇಳಿದ್ದಾರೆ.
ಆರ್.ರಾಮಚಂದ್ರನ್ ಎಂದು ಗುರುತಿಸಲಾದ ರೈಲಿನ ಚಾಲಕ ಎಂಜಿನ್ ಬೋಗಿಯೊಳಗೆ ಹಲವಾರು ಗಂಟೆಗಳ ಕಾಲ ಸಿಕ್ಕಿಬಿದ್ದ ಬಳಿಕ ಸತ್ತಿದ್ದಾರೆ. ಇನ್ನೊಬ್ಬ ಪ್ರಯಾಣಿಕರು ಕೂಡ ಅಸುನೀಗಿದ್ದಾರೆಂದು ಸೆಂಟ್ರಲ್ ರೈಲ್ವೆ ವಕ್ತಾರ ತಿಳಿಸಿದರು. ರೈಲ್ವೆ ಹಳಿಗಳಿಂದ ಅವಶೇಷಗಳನ್ನು ತೆಗೆಯಲು ರೈಲ್ವೆಯ ರಕ್ಷಣಾ ಮತ್ತು ಪರಿಹಾರ ತಂಡ ಹಾಗೂ ಎಂಸಿಜಿಎಂ ಅಗ್ನಿಶಾಮಕ ಪಡೆ ನಿರತವಾಗಿತ್ತು.
ಸಹಜಸ್ಥಿತಿ ಮರುಸ್ಥಾಪನೆಯಾಗುವ ತನಕ ಕೊಳವೆ ಮಾರ್ಗದಿಂದ ನೀರಿನ ಪೂರೈಕೆಯನ್ನು ಸಹ ನಿಲ್ಲಿಸಲಾಗಿದೆ. ಹಳಿಗಳು ಸಂಚಾರಕ್ಕೆ ಮುಕ್ತವಾಗುವ ತನಕ ಎಲ್ಲ ಮಾರ್ಗಗಳಲ್ಲಿ ಸಬರ್ಬನ್ ಸೇವೆಗಳನ್ನು ಸೆಂಟ್ರಲ್ ರೈಲ್ವೆ ರದ್ದುಮಾಡಿದೆ.