ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಛಗನ್ ಭುಜಬಲ್ ಅವರನ್ನು ಆಯ್ಕೆ ಮಾಡಲಾಗಿದೆ. ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಈ ನಿರ್ಧಾರ ಕೈಗೊಂಡಿದೆ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ಮತ್ತೆ ಅಧಿಕಾರ ಪಡೆದಿರುವ ಕಾರಣ ಉಪಮುಖ್ಯಮಂತ್ರಿ ಪಟ್ಟವು ಎನ್‌ಸಿಪಿ ಪಾಲಿಗೆ ಒದಗಿ ಬಂದಿದೆ.
ಉಪ ಮುಖ್ಯಮಂತ್ರಿ ಹುದ್ದೆಗೆ ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಆರ್. ಆರ್. ಪಾಟೀಲ್ ಹಾಗೂ ಶರದ್ ಪವಾರ್ ಅವರ ಸಹೋದರನ ಪುತ್ರ ಅಜಿತ್ ಪವಾರ್ ಹೆಸರು ಕೇಳಿಬಂದಿತ್ತು. ಆದರೆ ಇವರನ್ನೆಲ್ಲ ಹಿಂದಿಕ್ಕಿರುವ ಛಗನ್ ಅವರು ಮತ್ತೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನ ಏರುವಲ್ಲಿ ಸಫಲರಾಗಿದ್ದಾರೆ.
ಸೋಮವಾರ ಸಂಜೆ ಇಲ್ಲಿ ನಡೆದ ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಎನ್‌ಸಿಪಿ ಹಿರಿಯ ನಾಯಕ ಪ್ರಫುಲ್ ಪಟೇಲ್ ಈ ನಿರ್ಧಾರವನ್ನು ಪ್ರಕಟಿಸಿದರು. ಇದಕ್ಕೂ ಮುನ್ನ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಆರಿಸುವ ಅಧಿಕಾರವನ್ನು ಪಕ್ಷದ ವರಿಷ್ಠ ಶರದ್ ಪವಾರ್‌ಗೆ ನೀಡಲಾಗಿತ್ತು.
ಶಿವಸೇನೆಯಲ್ಲಿದ್ದ ಛಗನ್ ಭುಜಬಲ್ 1999-2003ರ ಅವಧಿಯಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದರು. ಕಳೆದ ವರ್ಷ ಮುಂಬೈ ದಾಳಿ ಘಟನೆ ನಂತರ ಆರ್. ಆರ್. ಪಾಟೀಲ್ ಉಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದಾಗ ಮತ್ತೆ ಆ ಹುದ್ದೆ ಛಗನ್ ಪಾಲಿಗೆ ಒಲಿದಿತ್ತು.