ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿನಕರನ್ ಭಡ್ತಿ ಶಿಫಾರಸು ವಾಪಸ್ ಪಡೆದ ಸುಪ್ರೀಂ ಕೋರ್ಟ್ (PD Dinakaran | Supreme Court | Karnataka CJ | KG Balakrishnan)
Bookmark and Share Feedback Print
 
ಕಳೆದ ಹಲವಾರು ತಿಂಗಳುಗಳಿಂದ ವಿವಾದಕ್ಕೆಡೆ ಮಾಡಿರುವ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಅಕ್ರಮ ಆಸ್ತಿ ಪ್ರಕರಣವು ಮತ್ತೊಂದು ಮಗ್ಗುಲನ್ನು ಪಡೆದುಕೊಂಡಿದ್ದು, ಪಿ.ಡಿ. ದಿನಕರನ್ ಅವರ ಭಡ್ತಿ ಶಿಫಾರಸನ್ನು ಸುಪ್ರೀಂ ಕೋರ್ಟ್ ಹಿಂದಕ್ಕೆ ಪಡೆದುಕೊಂಡಿದೆ.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಸಮಿತಿ ಈ ನಿರ್ಧಾರಕ್ಕೆ ಬಂದಿದೆ. ನ್ಯಾಯಾಧೀಶ ಎಸ್.ಎಚ್. ಕಪಾಡಿಯಾ, ತರುಣ್ ಚಟರ್ಜಿ, ಅಲ್ಟಮಾಸ್ ಕಬೀರ್ ಮತ್ತು ಆರ್. ರವೀಂದ್ರನ್ ಅವರನ್ನೊಳಗೊಂಡ ಸಮಿತಿಯು ಸಮಾಲೋಚನೆ ನಡೆಸಿದ ನಂತರ ಭಡ್ತಿ ಶಿಫಾರಸ್ಸನ್ನು ಹಿಂಪಡೆದುಕೊಳ್ಳಲು ತೀರ್ಮಾನಿಸಿತು ಎಂದು ಮೂಲಗಳು ಹೇಳಿವೆ.
Dinakaran
PTI


ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳ ಸಮಿತಿಯು ದಿನಕರನ್ ಭಡ್ತಿಗೆ ಶಿಫಾರಸ್ಸು ಮಾಡಿತ್ತು. ಆದರೆ ಆಗಸ್ಟ್ 27ರಂದು ಈ ಶಿಫಾರಸ್ಸನ್ನು ಕೇಂದ್ರ ಕಾನೂನು ಸಚಿವಾಲಯ ತಿರಸ್ಕರಿಸಿದ್ದಲ್ಲದೆ, ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೇಳಿತ್ತು.

ಕೇಂದ್ರ ಸರಕಾರದ ಜತೆಗಿನ ಸಂಘರ್ಷವನ್ನು ತಪ್ಪಿಸಿಕೊಂಡಿರುವ ಸುಪ್ರೀಂ ಕೋರ್ಟ್, ತಾನು ಈ ಹಿಂದೆ ಮಾಡಿದ್ದ ಶಿಫಾರಸ್ಸನ್ನೀಗ ಹಿಂಪಡೆದುಕೊಂಡಿದ್ದು, ದಿನಕರನ್ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗುವ ಅವಕಾಶ ತಪ್ಪಿ ಹೋದಂತಾಗಿದೆ.

ಶೀಘ್ರದಲ್ಲೇ ಸಮಿತಿ ರಚನೆ...
ಕಳೆದ ಕೆಲವು ದಿನಗಳ ಹಿಂದಷ್ಟೇ 76 ರಾಜ್ಯಸಭಾ ಸದಸ್ಯರು ದಿನಕರನ್ ಪದಚ್ಯುತಿಗೆ ಸಂಬಂಧಿಸಿ ಮಹಾಭಿಯೋಗಕ್ಕೆ ನಿರ್ಣಯ ತೆಗೆದುಕೊಂಡು ಸಭಾಧ್ಯಕ್ಷರಿಗೆ ಸಲ್ಲಿಸಿದ್ದರು.

ಇದೀಗ ನ್ಯಾಯಾಧೀಶರ ವಾಗ್ದಂಡನೆಗೆ ಸಂಬಂಧಿಸಿದಂತೆ ರಾಜ್ಯಸಭೆ ಸ್ಪೀಕರ್ ಹಮೀದ್ ಅನ್ಸಾರಿಯವರು ಅರ್ಜಿಯನ್ನು ಸ್ವೀಕರಿಸಿದ್ದು, ಶೀಘ್ರದಲ್ಲೇ ಮೂವರನ್ನೊಳಗೊಂಡ ಸಮಿತಿಯನ್ನು ರಚಿಸಲಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಹಾಗೂ ಕಾನೂನು ತಜ್ಞರೊಬ್ಬರನ್ನೊಳಗೊಂಡ ಸಮಿತಿಯು ದಿನಕರನ್ ಕುರಿತ ಅರ್ಜಿಯನ್ನು ಪರಿಶೀಲಿಸಿ ಸಭಾಧ್ಯಕ್ಷರಿಗೆ ವರದಿ ಸಲ್ಲಿಸಬೇಕಿದೆ.

ನ್ಯಾಯಾಂಗ ಕಲಾಪಗಳಿಂದ ಹೊರಗುಳಿದಿರುವ ದಿನಕರನ್ ರಾಜೀನಾಮೆ ನೀಡುವ ಸಾಧ್ಯತೆಗಳನ್ನು ತಳ್ಳಿ ಹಾಕಿದ್ದು, ರಾಜ್ಯಸಭೆಯ ಮಹಾಭಿಯೋಗ ನಿರ್ಣಯವನ್ನು ದುರ್ದೈವ ಎಂದು ಬಣ್ಣಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ