ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವಧಿ ಡಿಸೆಂಬರ್ 19ರಂದು ಕೊನೆಗೊಳ್ಳಲಿದ್ದು, ಅದೇ ದಿನ ನಡೆಯಲಿರುವ ಪಕ್ಷದ ಸಂಸದೀಯ ಸಮಿತಿಯ ಸಭೆಯಲ್ಲಿ ನೂತನ ನಾಯಕನ ಘೋಷಣೆಯಾಗಲಿದೆ.
ಈ ಸ್ಥಾನಕ್ಕೆ ಮಹಾರಾಷ್ಟ್ರ ರಾಜ್ಯ ಬಿಜೆಪಿ ಮುಖ್ಯಸ್ಥ ನಿತಿನ್ ಗಡ್ಕರಿಯೇ ನೆಚ್ಚಿನ ಅಭ್ಯರ್ಥಿ, ಬಹುತೇಕ ಅವರೇ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.
ಆದರೆ ಪಕ್ಷದ ಉನ್ನತ ಮುಖಂಡರಿಂದ ನೂತನ ಅಧ್ಯಕ್ಷರ ಆಯ್ಕೆ ಕುರಿತು ಯಾವುದೇ ಹೇಳಿಕೆಗಳು ಇದುವರೆಗೆ ಹೊರ ಬಂದಿಲ್ಲ.
ಕೇಂದ್ರೀಯ ನಾಯಕನ ಸ್ಥಾನದ ಆಯ್ಕೆಯಲ್ಲಿ ದೆಹಲಿಯೇತರ ಮತ್ತು ತಲೆಮಾರು ಬದಲಾವಣೆಯೂ ಪ್ರಮುಖ ಅಂಶವಾಗಿರುವ ಕಾರಣ ಗಡ್ಕರಿಯವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿಯ ಆಂತರಿಕ ಮೂಲಗಳು ಹೇಳಿವೆ.
ಎಲ್.ಕೆ. ಅಡ್ವಾಣಿ ಮತ್ತು ಆರೆಸ್ಸೆಸ್ ಸುಪ್ರೀಮ್ ಮೋಹನ್ ಭಾಗ್ವತ್ ಕೂಡ ಗಡ್ಕರಿ ಆಯ್ಕೆಯನ್ನೇ ಬೆಂಬಲಿಸಿರುವುದರಿಂದ ಬಹುತೇಕ ಇದೇ ನಿರ್ಣಯವೆಂದು ಪರಿಗಣಿಸಲಾಗುತ್ತಿದೆ. ಬೇರೆ ಯಾರನ್ನೂ ಈ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಪ್ರಭಾವಿ ವಲಯ ದೆಹಲಿಯನ್ನು ಹೊರತುಪಡಿಸಿದ ಪ್ರದೇಶದಿಂದ ಮುಂದಿನ ಬಿಜೆಪಿ ಅಧ್ಯಕ್ಷರು ಆಯ್ಕೆಯಾಗಬೇಕು ಎಂದು ಕೆಲ ಸಮಯದ ಹಿಂದೆ ಆರೆಸ್ಸೆಸ್ ಅಧ್ಯಕ್ಷ ಹೇಳಿದ್ದರು.
ಇದರೊಂದಿಗೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆಯಿಂದ ಯತ್ನಿಸುತ್ತಿದ್ದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ಅನಂತ್ ಕುಮಾರ್ ಅವರಿಗೆ ನಿರಾಸೆಯಾಗಲಿದೆ ಎಂದು ಮೂಲಗಳು ಹೇಳಿವೆ.
ಇದರ ಬೆನ್ನಿಗೆ ಲೋಕಸಭೆಯ ಚಳಿಗಾಲದ ಅಧಿವೇಶನದ ಮುಕ್ತಾಯದ ದಿನ ಡಿಸೆಂಬರ್ 21ರಂದು ಪ್ರತಿಪಕ್ಷ ನಾಯಕ ಅಡ್ವಾಣಿ ಜಾಗಕ್ಕೆ ಪ್ರಸಕ್ತ ಉಪ ನಾಯಕಿಯಾಗಿರುವ ಸುಷ್ಮಾ ಸ್ವರಾಜ್‌ರನ್ನು ತರುವ ನಿರ್ಧಾರವನ್ನೂ ಪಕ್ಷ ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ಬಿಜೆಪಿ ನಿಕಟ ಮೂಲಗಳು ಬಹಿರಂಗಪಡಿಸಿವೆ.