ಸುಂದರ ಕನಸುಗಳನ್ನು ಹೊತ್ತು ಬದುಕಿನ ಹೊಸ್ತಿಲಲ್ಲಿ ಋತು ಬದಲಾವಣೆಗಾಗಿ ಕಾಯುತ್ತಿದ್ದ ಯುವತಿಯಾಗಿದ್ದಾಕೆ; ಅದೊಂದು ಕೆಟ್ಟ ದಿನ ಆ ಹಸಿಹಸಿ ಭಾವಗಳನ್ನು ದುರುಳನೊಬ್ಬ ಛೇದಿಸಿಯೇ ಬಿಟ್ಟಿದ್ದ. ಅದು ನಡೆದು ಹೋಗಿ 36 ವರ್ಷಗಳೇ ಕಳೆದರೂ ಇದುವರೆಗೂ ಆಕೆ ಸತ್ತು ಬದುಕುತ್ತಿದ್ದಾಳೆ-- ಮುದುಕಿಯಾಗಿರುವ ಆಕೆಗೀಗ ದಯಾಮರಣಕ್ಕೆ ಅವಕಾಶ ನೀಡಿ ಎಂದು ಆಪ್ತರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
1973ರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಬಲಾತ್ಕಾರ ನಡೆದಿತ್ತು. ಆ ಹೊತ್ತಿಗೆ ಅದೇ ಆಸ್ಪತ್ರೆಯ ವೈದ್ಯರೊಂದಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದ ಈ ನತದೃಷ್ಟೆಯ ಹೆಸರು ಅರುಣಾ ರಾಮಚಂದ್ರ ಶಾನಭಾಗ್.
ಅಷ್ಟೇ ಆಗಿದ್ದಿದ್ದರೆ ಆಕೆಯ ಬದುಕು ಹೀಗೆ ಜೀವಚ್ಛವವಾಗುತ್ತಿರಲಿಲ್ಲ. ವಿಧಿಯೆಂಬ ಕ್ರೂರಿ ಆಕೆಯ ಬದುಕನ್ನೇ ಶೇ.99ರಷ್ಟು ಆಪೋಶನ ತೆಗೆದುಕೊಳ್ಳಲು ನಿರ್ಧರಿಸಿಯಾಗಿತ್ತು. ಕೊಲ್ಲುವುದು ಅದಕ್ಕೂ ಬೇಕಿರಲಿಲ್ಲವೇನೋ?
ಮುಂಬೈಯ ಕಿಂಗ್ ಎಡ್ವರ್ಡ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಅರುಣಾ ಕೆಲಸ ಮಾಡುತ್ತಿದ್ದಾಗ ಆಕೆಗೆ ಕೇವಲ 24 ವರ್ಷ. ರೋಗಿಗಳಿಗೆ ಹಂಚಬೇಕಾದ ಹಾಲನ್ನು ಸಹೋದ್ಯೋಗಿಯೊಬ್ಬ ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ಮೇಲಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಸತ್ಯದ ಕಡೆ ವಾಲಿದ್ದೇ ಆಕೆಗೆ ಮುಳುವಾದದ್ದು.
ತನ್ನ ಕೊಠಡಿಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದಾಗ ಆ ದುಷ್ಕರ್ಮಿ ಎರಗಿ ಅತ್ಯಾಚಾರ ನಡೆಸಿಯೇ ಬಿಟ್ಟ. ಅಷ್ಟಕ್ಕೇ ತನ್ನ ಕುಕೃತ್ಯವನ್ನು ಮುಗಿಸದ ಪಾಪಿ ನಾಯಿಯನ್ನು ಕಟ್ಟುವ ಸರಪಳಿಯಿಂದ ಆಕೆಯ ಕತ್ತನ್ನು ಬಿಗಿಗೊಳಿಸಿ ಉಸಿರು ನಿಲ್ಲಿಸಲು ಯತ್ನಿಸಿದ್ದ. ಪರಿಣಾಮ ಮಿದುಳಿಗೆ ಬಹುದೊಡ್ಡ ಆಘಾತವಾಯಿತು.
ಅಷ್ಟೇ, ಆ ನಂತರ ಆಕೆ ಎಂದೂ ಮಾತನಾಡಿಲ್ಲ, ಎದ್ದು ಕುಳಿತಿಲ್ಲ, ಮಗ್ಗುಲು ಬದಲಾಯಿಸಿಲ್ಲ, ತಾನಾಗಿ ಆಹಾರ ತಿಂದಿಲ್ಲ, ಅಷ್ಟೇ ಏಕೆ ಕಣ್ಣು ಬಿಡಲೂ ಆಕೆಗೆ ಸಾಧ್ಯವಾಗಿಲ್ಲ. ತನ್ನನ್ನು ಉಪಚರಿಸುತ್ತಿರುವವರು ಯಾರೆಂದು ಅವಳಿಗೆ ಗೊತ್ತೇ ಇಲ್ಲ.
ಆಕೆ ಈ ಸ್ಥಿತಿಗೆ ತಲುಪಿ ಬರೋಬ್ಬರಿ 36 ವರ್ಷಗಳೇ ಸಂದಿವೆ. ಅಂದಿನ 24ರ ಯುವತಿಗೀಗ 62 ವರ್ಷ. ದಯಾಮರಣಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದನ್ನು ಅರಿತ ಆಕೆಯ ಸ್ನೇಹಿತೆ ಪಿಂಕಿ ವಿರಾಣಿ ಎಂಬ ಪತ್ರಕರ್ತೆ, ಕನಿಷ್ಠ ಆಕೆಗೆ ನೀಡಲಾಗುತ್ತಿರುವ ಆಹಾರವನ್ನಾದರೂ ಸ್ಥಗಿತಗೊಳಿಸಲು ಅವಕಾಶ ನೀಡಿದ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ಸಂಬಂಧ ಇದೀಗ ನ್ಯಾಯಾಲಯವು ಕೇಂದ್ರ ಸರಕಾರದ ಅಭಿಪ್ರಾಯವನ್ನು ಕೇಳಿದೆ. ಆಹಾರ ಸ್ಥಗಿತಗೊಳಿಸುವ ಮೂಲಕ ದಯಾಮರಣ ಪಾಲಿಸಲು ಕೇಂದ್ರ ಒಪ್ಪಿದರೆ ಅರುಣಾಳ ಬದುಕಿನ ಯಾತನೆಗೊಂದು ಅಂತ್ಯ ಸಿಗಬಹುದು.
ಅಂದ ಹಾಗೆ, ಅರುಣಾಳ ಬಾಳನ್ನು ಮೂರಾಬಟ್ಟೆ ಮಾಡಿದ್ದಷ್ಟೇ ಅಲ್ಲದೆ ಕೋಮಾ ಸ್ಥಿತಿಗೆ ತಲುಪುವಂತೆ ಮಾಡಿದ ಪಾಪಿಯ ಕೃತ್ಯ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಹಾಗಾಗಿ ವಂಚನೆ ಪ್ರಕರಣಕ್ಕಾಗಿ ಕೇವಲ ಆರು ವರ್ಷಗಳ ಕಾಲ ಜೈಲಲ್ಲಿ ಕಳೆದು ವಾಪಸ್ ಬಂದಿದ್ದಾನೆ!