ಕಳೆದ ವರ್ಷದ ಮುಂಬೈ ಭಯೋತ್ಪಾದನಾ ದಾಳಿ ಸಂಬಂಧ ತನ್ನ ತಪ್ಪೊಪ್ಪಿಗೆ ಹೇಳಿಕೆಯನ್ನು ಪಾಕಿಸ್ತಾನ ಮೂಲದ ಉಗ್ರ ಮೊಹಮ್ಮದ್ ಅಜ್ಮಲ್ ಕಸಬ್ ಹಿಂದಕ್ಕೆ ಪಡೆದುಕೊಂಡಿದ್ದಾನೆ. ಪೊಲೀಸರು ಹಿಂಸೆ ನೀಡಿ ಬಲವಂತ ಮಾಡಿದ ಕಾರಣ ತಾನು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದೆ ಎಂದು ಪ್ಲೇಟ್ ಬದಲಾಯಿಸಿದ್ದಾನೆ.
2008ರ ನವೆಂಬರ್‌ನಲ್ಲಿ ಮುಂಬೈಯ ಹಲವೆಡೆ ನಡೆದಿದ್ದ ಉಗ್ರಗಾಮಿ ದಾಳಿಗಳಲ್ಲಿ ಬದುಕುಳಿದಿದ್ದ ಏಕೈಕ ಆರೋಪಿ ಕಸಬ್. ಇದುವರೆಗೆ ತನ್ನೆಲ್ಲ ಕೃತ್ಯಗಳನ್ನು ಒಪ್ಪಿಕೊಂಡು ಹೇಳಿಕೆ ನೀಡಿದ್ದ ಆರೋಪಿ, ಇಂದು ನ್ಯಾಯಾಲಯದಲ್ಲಿ ಅವೆಲ್ಲವನ್ನೂ ನಿರಾಕಸಿರುವ ಮೂಲಕ ಅಚ್ಚರಿ ಹುಟ್ಟಿಸಿದ್ದಾನೆ.
ಕಸಬ್ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ. ಇದುವರೆಗೆ ಆತ ನೀಡಿರುವ ಸುಮಾರು 300 ಗಂಟೆಗಳ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.
ಪೊಲೀಸರು ಬಂಧಿಸಿದ ಕೂಡಲೇ ತಾನು ಅಪರಾಧಿ ಎಂದಿರುವುದು, ಮ್ಯಾಜಿಸ್ಟ್ರೇಟ್ ಎದುರು ತಪ್ಪೊಪ್ಪಿಗೆ ನೀಡಿರುವುದು ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ತಾನು ತಪ್ಪಿತಸ್ಥ ಎಂದು ಒಪ್ಪಿಕೊಂಡಿರುವುದು ಹೀಗೆ ಕಸಬ್ ಮೂರು ತಪ್ಪೊಪ್ಪಿಗೆಗಳನ್ನು ಈ ಹಿಂದೆ ನೀಡಿದ್ದ.
ಅವರು ಗುರುತಿಸಿದ್ದು ಫೋಟೋ ನೋಡಿ... ತಾನು ಮುಂಬೈಯಲ್ಲಿ ನಡೆದ ಯಾವುದೇ ಭಯೋತ್ಪಾದನಾ ದಾಳಿಗಳಲ್ಲಿ ಪಾಲ್ಗೊಂಡಿಲ್ಲ. ಅಲ್ಲದೆ ಪಾಕಿಸ್ತಾನಿ ಉಗ್ರಗಾಮಿ ನಾಯಕರ ಜತೆ ಫೋನ್ ಅಥವಾ ಯಾವುದೇ ರೀತಿಯ ಸಂಪರ್ಕ ಹೊಂದಿರಲಿಲ್ಲ ಅಥವಾ ಮಾತನಾಡಿರಲಿಲ್ಲ. ತನ್ನ ಚಿತ್ರಗಳು ಭಾರತೀಯ ಪತ್ರಿಕೆಗಳು ಮತ್ತು ಟೀವಿಗಳಲ್ಲಿ ಬಂದದ್ದನ್ನು ನೋಡಿ ಸಾಕ್ಷಿಗಳು ನನ್ನನ್ನು ಗುರುತಿಸಿದ್ದಾರೆ ಎಂದು ಕಸಬ್ ಹೇಳಿಕೆ ನೀಡಿದ್ದಾನೆ.
ಕಸಬ್ ತಪ್ಪೊಪ್ಪಿಗೆ ನಿರಾಕರಣೆಯಿಂದ ಪ್ರಕರಣದ ಮೇಲೆ ಯಾವುದೇ ದುಷ್ಪರಿಣಾಮವಾಗದು. ಇದು ಎಲ್ಲಾ ಆರೋಪಿಗಳು ಅನುಸರಿಸುವ ತಂತ್ರವಷ್ಟೇ ಎಂದು ಕಸಬ್ ಹೇಳಿಕೆಗೆ ದೇಶದ ಪ್ರಖ್ಯಾತ ಕ್ರಿಮಿನಲ್ ವಕೀಲರುಗಳು ಪ್ರತಿಕ್ರಿಯಿಸಿದ್ದಾರೆ.
ಮೊದಲೇ ಬಂಧಿಸಿದ್ದರು... ನನ್ನನ್ನು ಭಾರತೀಯ ಪೊಲೀಸರು ಮುಂಬೈ ದಾಳಿಗೆ ಅಂದರೆ ನವೆಂಬರ್ 6ರ ಹೊತ್ತಿಗೆ ಬಂಧಿಸಿದ್ದರು. ಘಟನೆ ನಡೆಯುವ 20 ದಿನಗಳ ಮೊದಲೇ ತಾನು ಪೊಲೀಸರ ವಶದಲ್ಲಿದ್ದೆ ಎಂದು ಮತ್ತೊಂದು ಅಚ್ಚರಿ ಹುಟ್ಟಿಸುವ ಹೇಳಿಕೆ ಕಸಬ್‌ನಿಂದ ಬಂದಿದೆ.
ನಾನು ಉಗ್ರ ಕಸಬ್ ಅಲ್ಲ... ನಾನು ಮುಂಬೈ ದಾಳಿ ನಡೆಸಿದ ಭಯೋತ್ಪಾದಕ ಕಸಬ್ ಅಲ್ಲ. ಆತ ಸತ್ತಿದ್ದಾನೆ. ನಾನು ಬೇರೆ ಕಸಬ್ ಎನ್ನುವ ಕಲ್ಪನಾತೀತ ಅಣಿಮುತ್ತನ್ನೂ ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಂಡಿದ್ದ ಉಗ್ರ ಉದುರಿಸಿದ್ದಾನೆ.
ಹೆಡ್ಲಿಯನ್ನು ಭೇಟಿಯಾಗಿದ್ದೆ... ಪ್ರಸಕ್ತ ಅಮೆರಿಕಾದ ಜೈಲಿನಲ್ಲಿರುವ ಲಷ್ಕರ್ ಇ ತೋಯ್ಬಾ ನಾಯಕ ಎಂದು ಆರೋಪಿಸಲಾಗಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯೀದ್ ಗಿಲಾನಿಯನ್ನು ತಾನು ಈ ಹಿಂದೆ ಭೇಟಿಯಾಗಿದ್ದೆ ಎಂದು ಕಸಬ್ ತಿಳಿಸಿದ್ದಾನೆ. ಆದರೆ ಈ ವಿಚಾರಣೆಯಲ್ಲಿ ಹೆಡ್ಲಿಯ ಅಗತ್ಯವಿಲ್ಲ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿತು.