ನಾನು ಬಾಲಿವುಡ್ ಸಿನಿಮಾದಲ್ಲಿ ನಟಿಸಲೆಂದು 20 ದಿನಗಳ ವೀಸಾ ಪಡೆದುಕೊಂಡು ಭಾರತಕ್ಕೆ ಬಂದಿದ್ದೆ. ಮುಂಬೈ ದಾಳಿ ನಡೆಯುವ ಹಿಂದಿನ ದಿನವೇ ನನ್ನನ್ನು ಪೊಲೀಸರು ಬಂಧಿಸಿದ್ದರು. ಭಯೋತ್ಪಾದಕ ಎನ್ನಲಾಗುತ್ತಿರುವ ಕಸಬ್ ನಾನಲ್ಲ, ಆತ ಸತ್ತಿದ್ದಾನೆ-- ಇದನ್ನು ಹೇಳಿರುವುದು ಅದೇ ಪರಮಪಾಪಿ ಅಜ್ಮಲ್ ಅಮೀರ್ ಕಸಬ್.
ಕಳೆದ ವರ್ಷದ ನವೆಂಬರ್ 26ರ ಕರಾಳ ರಾತ್ರಿಯಂದು ಮುಂಬೈಯೆಂಬ ಮಹಾನಗರಿಗೆ ಅಪ್ಪಳಿಸಿ ನೊಣಗಳನ್ನು ಹಿಸುಕಿದಂತೆ ನೂರಾರು ಅಮಾಯಕರ ನರಮೇಧ ನಡೆಸಿದ್ದ ಭಯೋತ್ಪಾದಕರ ಪೈಕಿ ಬದುಕುಳಿದಿರುವ ಏಕೈಕ ವ್ಯಕ್ತಿ ಕಸಬ್. ಇದುವರೆಗೆ ತನ್ನೆಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದ ಕಸಬ್ ಇಂದು ನ್ಯಾಯಾಲಯದಲ್ಲಿ ಅದೆಲ್ಲವನ್ನೂ ಸಾರಾಸಗಟಾಗಿ ಅಲ್ಲಗಳೆದಿದ್ದಾನೆ.
PTI
ಪೊಲೀಸರು ಹೊಡೆದು-ಬಡಿದು ಚಿತ್ರಹಿಂಸೆ ನೀಡಿದ ಕಾರಣ ನಾನು ತಪ್ಪೊಪ್ಪಿಗೆ ನೀಡಿದ್ದೆ. ಮುಂಬೈ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ವಿಫಲ ಯತ್ನ ನಡೆಸಿದ್ದಾನೆ.
ಆತ ಇಂದು ನ್ಯಾಯಾಲಯದಲ್ಲಿ ನೀಡಿರುವ ಕೆಲವು ಕಲ್ಪನಾತೀತ, ಸಿನಿಮೀಯ ಹೇಳಿಕೆಗಳ ಪಾಠಗಳನ್ನು ಕೆಳಗೆ ನೀಡಲಾಗಿದೆ.
** ಬಾಲಿವುಡ್ ಚಲನಚಿತ್ರದಲ್ಲಿ ನಟಿಸಲು ನಾನು ನವೆಂಬರ್ 26ಕ್ಕಿಂತ 20 ದಿನ ಮೊದಲೇ 20 ದಿನಗಳ ವೀಸಾ ಪಡೆದುಕೊಂಡು ಮುಂಬೈಗೆ ಬಂದಿದ್ದೆ.
** ನವೆಂಬರ್ 25ರಂದು ರಾತ್ರಿ ನಾನು ಜುಹುವಿನಲ್ಲಿ ಸಿನಿಮಾವೊಂದನ್ನು ವೀಕ್ಷಿಸಲು ತೆರಳುತ್ತಿದ್ದಾಗ ಸ್ಥಳೀಯ ಪೊಲೀಸರು ನನ್ನನ್ನು ಬಂಧಿಸಿದ್ದರು. ಬಳಿಕ ಅವರು ನನ್ನನ್ನು ಕ್ರೈಮ್ ಬ್ರ್ಯಾಂಚ್ ಪೊಲೀಸರಿಗೆ ಹಸ್ತಾಂತರಿಸಿದರು.
** ನಾನು ಮುಂಬೈಯಲ್ಲಿ ಮನೆಯೊಂದನ್ನು ಪಡೆಯುವ ಸಿದ್ಧತೆ ನಡೆಸುತ್ತಿದ್ದೆ. ಪಾಸ್‌ಪೋರ್ಟ್ ಹೊಂದಿದ್ದ ನಾನು ಪಾಕಿಸ್ತಾನದಿಂದ ಜುಹುವಿಗೆ ಬಂದ ಮೊದಲಿಗನೇನೂ ಅಲ್ಲ.
** ನವೆಂಬರ್ 27ರಂದು ನನ್ನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ಪೊಲೀಸರ ಕಸ್ಟಡಿಗೆ ಒಪ್ಪಿಸಲಾಯಿತು. ನಾನು ಮ್ಯಾಜಿಸ್ಟ್ರೇಟ್ ಎದುರು ಯಾವುದೇ ತಪ್ಪೊಪ್ಪಿಗೆ ನೀಡಿಲ್ಲ.
PTI
** ಪೊಲೀಸರು ನನ್ನಂತೆ ಕಾಣುವ ಪ್ರಮುಖ ಆರೋಪಿಯನ್ನು ಕೊಂದು ಹಾಕಿದ ಬಳಿಕ ಆತನ ಹೆಸರು 'ಅಬೂ ಆಲಿ' ಎಂದು ನನಗೆ ತಿಳಿಸಿದರು. ಆತ ನನ್ನಂತೆಯೇ ಇದ್ದ. ಆತನ ಎತ್ತರ, ಮುಖ ಕೂಡ ನನ್ನನ್ನೇ ಹೋಲುತ್ತಿತ್ತು. ಸತ್ತ ಉಗ್ರಗಾಮಿಯ ಬದಲಿಗೆ ನನ್ನನ್ನು ಆರೋಪಿತನನ್ನಾಗಿ ಮಾಡಲಾಯಿತು.
** ನನಗೆ ಡಿಂಗಿ (ದೋಣಿ) ಬಗ್ಗೆ ಏನೂ ಗೊತ್ತಿರಲಿಲ್ಲ. ನಾನು ಡಿಂಗಿಯನ್ನು ನೋಡಿದ್ದೇ ನ್ಯಾಯಾಲಯದಲ್ಲಿ -- ಇದು ಮುಂಬೈ ತಲುಪಲು ಉಗ್ರರು ಬಳಸಿದ ದೋಣಿಯಿಂದ ಬದ್ವಾರ್ ಪಾರ್ಕ್ ಮೂಲಕ ಬರುವಾಗ ತಾನು 10 ಮಂದಿ ಉಗ್ರರನ್ನು ನೋಡಿದ್ದೆ ಎಂದು ಭರತ್ ತಾಮೋರ್ ಎಂಬವರ ಸಾಕ್ಷಿಗೆ ಕಸಬ್ ನೀಡಿದ ಉತ್ತರ.
** ನಾನು ನನ್ನ ಜೀವನದಲ್ಲಿ ಯಾವತ್ತೂ ಎಕೆ-47 ರೈಫಲನ್ನು ನೋಡಿಯೇ ಇಲ್ಲ. ನಾನು ಯಾವತ್ತೂ ಗುಂಡು ಹಾರಿಸಿದವನಲ್ಲ.
** ಇದೀಗ ಅಮೆರಿಕಾ ಪೊಲೀಸರ ವಶದಲ್ಲಿರುವ ಶಂಕಿತ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿಯನ್ನು ನಾನು ಜೈಲಿನಲ್ಲಿರುವಾಗ ಭೇಟಿ ಮಾಡಿದ್ದೆ. ನಾಲ್ಕು ಮಂದಿ ಬಿಳಿಯರು ನನ್ನನ್ನು ಭೇಟಿ ಮಾಡಿದ್ದರು. ಮುಂಬೈ ದಾಳಿ ನಡೆದ ಸ್ವಲ್ಪ ಸಮಯದ ನಂತರ ಅವರು ಬಂದಿದ್ದರು.
PTI
** ತಾನು ಮತ್ತು ಅಬು ಇಸ್ಮಾಯಿಲ್ ಟ್ಯಾಕ್ಸಿಯೊಂದನ್ನು ಬಾಡಿಗೆಗೆ ಪಡೆದುಕೊಂಡು ಸಿಎಸ್‌ಟಿ ತಲುಪಿದ್ದೆವು ಎಂದು ನಾನು ಮ್ಯಾಜಿಸ್ಟ್ರೇಟ್‌ರಿಗೆ ಹೇಳಿಲ್ಲ.
** ಡ್ರೈವರ್ ಸೀಟಿನಲ್ಲಿ ಇಸ್ಮಾಯಿಲ್ ಮತ್ತು ಆತನ ಹಿಂದೆ ನಾನು ಕೂತಿದ್ದೆ. ಇಸ್ಮಾಯಿಲ್ ಚಾಲಕನ ಜತೆ ಮಾತನಾಡುತ್ತಿರುವಾಗ ನಾನು ಸೀಟಿನ ಅಡಿಗೆ ಬಾಂಬ್ ಸಿಕ್ಕಿಸಿದ್ದೆ ಎಂದು ನಾನು ಮ್ಯಾಜಿಸ್ಟ್ರೇಟ್‌ರಲ್ಲಿ ಹೇಳಿಲ್ಲ.
** ನಾನು ಅಬೂ ಹಂಝನನ್ನು (ತಲೆಮರೆಸಿಕೊಂಡಿರುವ ಆರೋಪಿ) ಸಂಪರ್ಕಿಸಿರಲಿಲ್ಲ. ನನ್ನ ಸೋನಿ ಎರಿಕ್ಸನ್ ಮೊಬೈಲ್ ಕಳೆದು ಹೋಗಿದ್ದ ಕಾರಣ ಯಾರಲ್ಲೂ ಮಾತನ್ನಾಡುವುದು ಸಾಧ್ಯವಾಗಿರಲಿಲ್ಲ.
** ದಾಳಿಯ ಸಂದರ್ಭದಲ್ಲಿ ಗಾಯಗೊಂಡಿದ್ದ 11ರ ಹರೆಯ ಹೆಣ್ಣು ಮಗುವಿನ ತಂದೆ ನಟವರ್ ಲಾಲ್, ತಾನು ಸಿಎಸ್‌ಟಿಯಲ್ಲಿ ಕಸಬ್ ಮತ್ತು ಮತ್ತೊಬ್ಬ ಉಗ್ರನನ್ನು ನೋಡಿರುವುದಾಗಿ ಹೇಳಿದ್ದಕ್ಕೆ ಉತ್ತರಿಸಿದ ಕಸಬ್, ಅಲ್ಲಿ ಗುಂಡು ಹಾರಿಸುತ್ತಿದ್ದುದು ಹೌದಾಗಿರಬಹುದು; ಆದರೆ ನಾನು ಆ ಸಂದರ್ಭದಲ್ಲಿ ಅಲ್ಲಿರಲಿಲ್ಲ - ಹಾಗಾಗಿ ನನಗೆ ಗೊತ್ತಿಲ್ಲ.
** ನಟವರ್ ಲಾಲ್ ನ್ಯಾಯಾಲಯದಲ್ಲಿ ನಿನ್ನನ್ನು ಗುರುತಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ನನ್ನ ಚಿತ್ರಗಳನ್ನು ಪತ್ರಿಕೆಗಳಲ್ಲಿ ನೋಡಿದ ನಂತರ ಯಾರು ಬೇಕಾದರೂ ನನ್ನನ್ನು ಗುರುತಿಸಬಹುದು.
** ನಾನು ಈ ಹಿಂದೆ ಯಾವುದೇ ತಪ್ಪೊಪ್ಪಿಗೆಯನ್ನು ನೀಡಿಲ್ಲ. ನೀಡಿದ್ದರೆ ಅದು ಪೊಲೀಸರ ಹಿಂಸೆ ಮತ್ತು ಬಲವಂತದ ಕಾರಣದಿಂದಾಗಿರಬಹುದು.