ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣಕ್ಕೆ ಕೇಂದ್ರ 'ಕೈ'ಕೊಟ್ಟರೆ ರಕ್ತಪಾತ; ರಾವ್ ಎಚ್ಚರಿಕೆ
(Lagadapati Rajagopal | Andhra Pradesh | Telangana | K. Chandrasekhara Rao)
ತೆಲಂಗಾಣಕ್ಕೆ ಕೇಂದ್ರ 'ಕೈ'ಕೊಟ್ಟರೆ ರಕ್ತಪಾತ; ರಾವ್ ಎಚ್ಚರಿಕೆ
ಹೈದರಾಬಾದ್, ಶನಿವಾರ, 19 ಡಿಸೆಂಬರ್ 2009( 20:21 IST )
ಪ್ರತ್ಯೇಕ ತೆಲಂಗಾಣ ರಚನೆ ನಿರ್ಧಾರದಿಂದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಹಿಂದಕ್ಕೆ ಸರಿದಲ್ಲಿ ರಕ್ತಪಾತವನ್ನು ಎದುರಿಸಬೇಕಾದೀತು ಎಂದು ತೆಲಂಗಾಣ ರಾಷ್ಟ್ರೀಯ ಹೋರಾಟ ಸಮಿತಿ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಎಚ್ಚರಿಕೆ ನೀಡಿದ್ದು, ಸೋಮವಾರದಿಂದ ತೆಲಂಗಾಣ ಪ್ರಾಂತ್ಯದಲ್ಲಿ ಬಸ್ ರ‌್ಯಾಲಿ ನಡೆಸಲು ನಿರ್ಧರಿಸಿದ್ದಾರೆ.
ಟಿಆರ್ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಸೋಮವಾರದಿಂದ ಬಸ್ ಯಾತ್ರೆ ಆರಂಭಿಸಲು ಯೋಚಿಸುತ್ತಿದ್ದಾರೆ. ಹೈದರಾಬಾದ್ ಸೇರಿದಂತೆ ತೆಲಂಗಾಣ ಪ್ರಾಂತ್ಯದ ಒಂಬತ್ತು ಜಿಲ್ಲೆಗಳಲ್ಲಿದು ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರೂ ಅದನ್ನು ನಿರ್ಲಕ್ಷಿಸಿರುವ ರಾವ್, ಕೇಂದ್ರ ಸರಕಾರ ನಿಲುವಿನಿಂದ ಹಿಂದಕ್ಕೆ ಸರಿಯಬಹುದು ಎಂಬ ಭೀತಿಯಿಂದ ಈ ಬಸ್ ಯಾತ್ರೆಗೆ ಕೈ ಹಾಕಲಿದ್ದಾರೆ.
ತೆಲಂಗಾಣ ಪ್ರತ್ಯೇಕ ರಾಜ್ಯ ಒತ್ತಾಯಿಸಿ ಸತತ 11 ದಿನಗಳ ಉಪವಾಸ ಸತ್ಯಾಗ್ರಹ ಮಾಡಿದ್ದ ಚಂದ್ರಶೇಖರ ರಾವ್ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದ ಸಂದರ್ಭದಲ್ಲಿ ಕೇಂದ್ರವು ಹೊಸ ರಾಜ್ಯದ ಸ್ಥಾಪನೆಗೆ ತನ್ನ ಒಪ್ಪಿಗೆ ಸೂಚಿಸಿತ್ತು.
ಉದ್ದೇಶಿತ ಬಸ್ ರ‌್ಯಾಲಿ ಸಂದರ್ಭದಲ್ಲಿ ಐವರು ವೈದ್ಯರು ರಾವ್ ಜತೆಗಿರಲಿದ್ದಾರೆ. ಟಿಆರ್ಎಸ್ ಮುಖ್ಯಸ್ಥರು ಭಾಗವಹಿಸುವ ಈ ಬಸ್ ಯಾತ್ರೆ ಸಾಗಲಿರುವ ಮಾರ್ಗವನ್ನು ನಿರ್ಧರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಮಾರಂಭಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಅಲ್ಲದೆ ಕೇಂದ್ರ ಸರಕಾರವು ತೆಲಂಗಾಣ ಕುರಿತ ನಿರ್ಧಾರದಿಂದ ಹಿಂದಕ್ಕೆ ಸರಿದಲ್ಲಿ ರಕ್ತಪಾತ ಮತ್ತು ಕೇಡುಗಾಲವನ್ನು ಕಾಣಬೇಕಾದೀತು ಎಂದು ಇದೇ ಸಂದರ್ಭದಲ್ಲಿ ರಾವ್ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ಅಖಂಡ ಆಂಧ್ರಕ್ಕಾಗಿ ರಾಯಲಸೀಮೆ ಮತ್ತು ಆಂಧ್ರ ಕರಾವಳಿಯಲ್ಲಿ ಹೋರಾಟ ನಡೆಯುತ್ತಿರುವ ಹೊತ್ತಲ್ಲೇ ತೆಲಂಗಾಣ ಪರ ಹೋರಾಟ ಆರಂಭವಾಗುವ ಸೂಚನೆ ಲಭಿಸಿದ್ದು, ಮತ್ತಷ್ಟು ರಾಜಕೀಯ ಮೇಲಾಟಗಳು ನಡೆಯುವ ಸಾಧ್ಯತೆಗಳಿವೆ. ಇವೆಲ್ಲದರಿಂದ ಕೇಂದ್ರ ಸರಕಾರ ಮತ್ತಷ್ಟು ಒತ್ತಡಕ್ಕೆ ಸಿಲುಕಲಿದೆ.