ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್ ಗಲ್ಲಿಗೇರಿಸಲು ಭಾರತಕ್ಕೇನೂ ಅರ್ಜೆಂಟಿಲ್ಲ: ತರೂರ್
(Ajmal Amir Kasab | Shashi Tharoor | India | Mumbai attack)
ಮುಂಬೈ ಭಯೋತ್ಪಾದನಾ ದಾಳಿಯ ಬಳಿಕ ಜೀವಂತವಾಗಿ ಸೆರೆ ಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು ಗಲ್ಲಿಗೇರಿಸಬೇಕೆಂಬ ಸಲಹೆಯನ್ನು ತಳ್ಳಿ ಹಾಕಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್, ಭಾರತ ಈ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
PTI
ಕಸಬ್‌ನನ್ನು ಆದಷ್ಟು ಬೇಗ ಗಲ್ಲಿಗೇರಿಸುವ ಮೂಲಕ ಭಾರತವು ಉಗ್ರರಿಗೆ ಕಠಿಣ ಸಂದೇಶವೊಂದನ್ನು ರವಾನಿಸಬಹುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ತರೂರ್, 'ನಮಗೆ ಜೀವಂತ ಸಿಕ್ಕಿರುವ ಏಕೈಕ ಉಗ್ರನಾತ. ಆತ ನಮಗೆ ಅಮೂಲ್ಯ ಮಾಹಿತಿಯ ಆಗರವಾಗಿರುವುದರಿಂದ ಆತನಿಗೆ ಗತಿ ಕಾಣಿಸಲು ನಮಗೆ ಯಾವುದೇ ಆತುರವಿಲ್ಲ' ಎಂದರು.
ನಮ್ಮಲ್ಲಿ ಪ್ರಜಾಪ್ರಭುತ್ವದಡಿ ನ್ಯಾಯಾಂಗ ವ್ಯವಸ್ಥೆಯಿದೆ. ಅದರಂತೆ ನಾವು ಮುಂದುವರಿಯುತ್ತೇವೆ ಎಂದು ತರೂರ್ ತಿಳಿಸಿದ್ದಾರೆ.
ಕಳೆದ ವರ್ಷದ ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿ ನೂರಾರು ಅಮಾಯಕರ ಸಾವಿಗೆ ಕಾರಣರಾಗಿದ್ದ 10 ಉಗ್ರಗಾಮಿಗಳಲ್ಲಿ ಜೀವಂತ ಸೆರೆ ಸಿಕ್ಕಿರುವ ಏಕೈಕ ಉಗ್ರ ಕಸಬ್ ಇದುವರೆಗೆ ತನ್ನ ಮೇಲಿದ್ದ ಆರೋಪಗಳನ್ನೆಲ್ಲ ಒಪ್ಪಿಕೊಂಡಿದ್ದರೂ, ಶುಕ್ರವಾರ ಅದನ್ನಲ್ಲ ನಿರಾಕರಿಸಿದ್ದಾನೆ.
ಪೊಲೀಸರು ಹೊಡೆದು ಬಡಿದು ಹಿಂಸಿಸಿದ ಕಾರಣ ಬಲವಂತದಿಂದ ನಾನು ತಪ್ಪೊಪ್ಪಿಗೆ ನೀಡಿದ್ದೆ. ಅಷ್ಟಕ್ಕೂ ನನ್ನನ್ನು ಮುಂಬೈ ದಾಳಿಗೂ ಮೊದಲು ಬಂಧಿಸಲಾಗಿತ್ತು ಮತ್ತು ಉಗ್ರ ಕಸಬ್ ನಾನಲ್ಲ. ಆತನನ್ನು ಪೊಲೀಸರು ಕೊಂದು ಹಾಕಿದ್ದಾರೆ. ಅವನನ್ನು ಹೋಲುವ ನನ್ನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ಬಣ್ಣ ಬದಲಾಯಿಸಿದ್ದ.