ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪರಾರಿಯಾಗಿದ್ದ ವಿಜಯವಾಡ ಸಂಸದ ಆಸ್ಪತ್ರೆಯಲ್ಲಿ ಹಾಜರ್! (Telangana | Andhra Pradesh | Vijayavada MP | L Rajagopal)
Bookmark and Share Feedback Print
 
ತೆಲಂಗಾಣ ಪ್ರತ್ಯೇಕ ರಾಜ್ಯ ವಿರೋಧಿಸಿ ಆಮರಣಾಂತ ಉಪವಾಸ ನಡೆಸುತ್ತಿದ್ದ ವಿಜಯವಾಡ ಸಂಸದ ಎಲ್. ರಾಜಗೋಪಾಲ್ ಮತ್ತೆ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿದ್ದ ಅವರು ಕಳೆದ ರಾತ್ರಿ ತಪ್ಪಿಸಿಕೊಂಡಿದ್ದರು. ಇದೀಗ ಸುಸಜ್ಜಿತ ಆಸ್ಪತ್ರೆಯೊಂದಕ್ಕೆ ಅವರು ದಾಖಲಾಗಿದ್ದಾರೆ.

ಅಖಂಡ ಆಂಧ್ರಕ್ಕಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರಾಜಗೋಪಾಲ್‌ರನ್ನು ಇತ್ತೀಚೆಗಷ್ಟೇ ಪೊಲೀಸರು ಬಂಧಿಸಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದರು.

ಆದರೆ ಕಳೆದ ರಾತ್ರಿ ಆಸ್ಪತ್ರೆಯ ಕೊಠಡಿಯಿಂದ ಹೊರ ಹೋದ ರಾಜಗೋಪಾಲ್ ಹೊರಗಡೆ ಕಾಯುತ್ತಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಸೇರಿಕೊಂಡು ಅಲ್ಲಿದ್ದ ಕಾರೊಂದರಲ್ಲಿ ಹೊರಟು ಹೋಗಿದ್ದರು. ಆಸ್ಪತ್ರೆಯಲ್ಲಿ ಸುಮಾರು 300ರಷ್ಟು ಪೊಲೀಸರಿದ್ದರೂ ಅವರನ್ನು ತಡೆಯಲು ವಿಫಲರಾಗಿದ್ದರು.

ಸರಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ವ್ಯವಸ್ಥೆಗಳಿರಲಿಲ್ಲ ಎಂದು ಆರೋಪಿಸಿದ್ದ ರಾಜಗೋಪಾಲ್ ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದರೂ ನಿರ್ಲಕ್ಷಿಸಿದ ಕಾರಣ ತಾನು ಹೀಗೆ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.

ಈ ನಡುವೆ ರಾಜಗೋಪಾಲ್ ಪರಾರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಜಯವಾಡ ಪೊಲೀಸ್ ಆಯುಕ್ತ ರಾಜೇಂದ್ರನಾಥ ರೆಡ್ಡಿಯವರನ್ನು ಆಂಧ್ರಪ್ರದೇಶ ಸರಕಾರ ಅಮಾನತುಗೊಳಿಸಿದೆ.

ತೆಲಂಗಾಣ ವಿರೋಧಿಸುತ್ತಿರುವ ಅವರು ಕಳೆದ ಒಂಬತ್ತು ದಿನಗಳಿಂದ ಉಪವಾಸ ನಡೆಸುತ್ತಿದ್ದಾರೆ. ನಕ್ಸಲರಿಂದ ಪ್ರಾಣ ಬೆದರಿಕೆ ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಆಗ್ರಹದ ಹಿನ್ನಲೆಯಲ್ಲಿ ಅವರನ್ನು ಮೂರು ದಿನಗಳ ಹಿಂದಷ್ಟೇ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದರು.

ರಾಜಗೋಪಾಲ್ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದ್ದರೂ ಆಹಾರ ಅಥವಾ ಚಿಕಿತ್ಸೆ ಪಡೆಯಲು ಅವರು ನಿರಾಕರಿಸುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಉಪವಾಸ ಆರಂಭಿಸಲು ಹೈದರಾಬಾದ್‌‍ಗೆ ತೆರಳುತ್ತಿದ್ದ ಅವರನ್ನು ಮೊದಲ ಬಾರಿಗೆ ಬಂಧಿಸಲಾಗಿತ್ತಾದರೂ, ಅವರು ಪೊಲೀಸ್ ಠಾಣೆಯಲ್ಲೇ ತನ್ನ ಪ್ರತಿಭಟನೆ ಶುರು ಹಚ್ಚಿಕೊಂಡಿದ್ದರು. ಬಿಡುಗಡೆಯಾಗುತ್ತಿದ್ದಂತೆ ಮರುದಿನ ವಿಜಯವಾಡದಲ್ಲಿ ತನ್ನ ಉಪವಾಸಕ್ಕೆ ಅಭಿಮಾನಿಗಳೊಂದಿಗೆ ಚಾಲನೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ