ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬ್ರಿ ಧ್ವಂಸ- ಕಾಂಗ್ರೆಸ್ಸಿಗೆ ಕ್ಷಮೆಯೇ ಇಲ್ಲ: ಮುಸ್ಲಿಂ ಮಂಡಳಿ
(Congress | PV Narasimha Rao | AIMPLB | Babri Mosque)
ಬಾಬ್ರಿ ಧ್ವಂಸ- ಕಾಂಗ್ರೆಸ್ಸಿಗೆ ಕ್ಷಮೆಯೇ ಇಲ್ಲ: ಮುಸ್ಲಿಂ ಮಂಡಳಿ
ಲಕ್ನೋ, ಸೋಮವಾರ, 21 ಡಿಸೆಂಬರ್ 2009( 15:25 IST )
ಬಾಬ್ರಿ ಮಸೀದಿ ಧ್ವಂಸ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರನ್ನು ಮುಸ್ಲಿಮರು ಕ್ಷಮಿಸಿಲ್ಲ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ತನ್ನ ಮಾತನ್ನು ಪುನರುಚ್ಛರಿಸಿದ್ದು, ಬಿಜೆಪಿ ಮುಖಂಡ ಎ.ಬಿ. ವಾಜಪೇಯಿಯವರ ಕುರಿತು ಲಿಬರ್ಹಾನ್ ಆಯೋಗವು ನಿರ್ಲಕ್ಷ್ಯವಹಿಸಿದೆ ಎಂದು ಕಿಡಿ ಕಾರಿದೆ.
ಬಾಬ್ರಿ ಮಸೀದಿ ಧ್ವಂಸದಲ್ಲಿ ಕಾಂಗ್ರೆಸ್ಸನ್ನು ಹೇಗೆ ತಾನೇ ಮರೆಯಲಿ? ಅಯೋಧ್ಯೆಯಲ್ಲಿನ ಐತಿಹಾಸಿಕ ಸ್ಮಾರಕವನ್ನು ಮುಗಿಸಿದ್ದಕ್ಕೆ ಪಕ್ಷವನ್ನಾಗಲೀ ಅಥವಾ ದಿವಂಗತ ರಾವ್ ಅವರನ್ನಾಗಲೀ ಕ್ಷಮಿಸಲು ಸಾಧ್ಯವೇ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ (ಎಐಎಂಪಿಎಲ್‌ಬಿ) ವಕ್ತಾರ ಮೌಲಾನ ಅಬ್ದುಲ್ ರಹೀಮ್ ಖುರೇಷಿ ಪ್ರಶ್ನಿಸಿದ್ದಾರೆ.
PTI
ಮಂಡಳಿಯು ರಾವ್ ಅವರು ದೋಷಮುಕ್ತರು ಎಂದು ಯಾವತ್ತೂ ಹೇಳಿಲ್ಲ ಎಂದು ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಮಸೀದಿ ನೆಲಸಮದಲ್ಲಿ ನರಸಿಂಹ ರಾವ್ ಅವರದ್ದೂ ಸಮಾನ ಪಾತ್ರವಿದೆ. ಅವರನ್ನು ಲಿಬರ್ಹಾನ್ ಆಯೋಗವೂ ದೋಷಮುಕ್ತರು ಎಂದು ಹೇಳಿಲ್ಲ. ಹಾಗಾಗಿ ಅವರಿಗೆ ಕ್ಲೀನ್ ಚಿಟ್ ನೀಡುವ ಯಾವುದೇ ಪ್ರಶ್ನೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಲಿಬರ್ಹಾನ್ ಆಯೋಗದಿಂದ ಆಪಾದನೆಗೊಳಗಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಮಾತಿಗಿಳಿದ ಖುರೇಷಿ, ಪಕ್ಷದ ಮುಖಂಡರಾಗಿ ಅವರು ಕೂಡ ಮಸೀದಿ ಧ್ವಂಸಕ್ಕೆ ಸಮಾನ ಕಾರಣರು ಎಂದರು.
ತಾಂತ್ರಿಕವಾಗಿ ವಾಜಪೇಯಿಯವರಿಗೂ ನೊಟೀಸ್ ನೀಡಬೇಕಿತ್ತು. ಆದರೆ ಆಯೋಗವು ಆ ಕೆಲಸವನ್ನು ಮಾಡಿಲ್ಲ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ವಾಜಪೇಯಿಯವರನ್ನು ಉಪೇಕ್ಷಿಸಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಾಜಪೇಯಿಯವರನ್ನು ಹೊಗಳುತ್ತಿದ್ದಾರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ರಾಜಕಾರಣಿಗಳು ತಮ್ಮ ನಿಲುವುಗಳನ್ನು ಯಾವ ಸಂದರ್ಭದಲ್ಲಿ ಬೇಕಾದರೂ ಬದಲಾಯಿಸಬಹುದು ಎಂದರು.